ಮೈಸೂರು : ನಾನು ದೇಶಪ್ರೇಮಿಯೋ, ದೇಶದ್ರೋಹಿಯೋ ಎಂಬುದನ್ನು ಮುಂಬರುವ ಚುನಾವಣೆಯಲ್ಲಿ ಜನರು ತೀರ್ಮಾನ ಮಾಡುತ್ತಾರೆ ಎಂದು ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ. ನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಸಂಸತ್ ಭದ್ರತಾ ಲೋಪ ಪ್ರಕರಣ ಮತ್ತು ಮನೋರಂಜನ್‌ಗೆ ಪಾಸ್ ನೀಡಿದ ವಿಚಾರವಾಗಿ ಪ್ರತಾಪ್ ಸಿಂಹ ಮಾತನಾಡಿದರು.
ನಾನು ದೇಶದ್ರೋಹಿನಾ? ದೇಶಪ್ರೇಮಿನಾ? ಎಂಬುದನ್ನು ಬೆಟ್ಟದಲ್ಲಿ ಕುಳಿತಿರುವ ತಾಯಿ ಚಾಮುಂಡೇಶ್ವರಿ, ಬ್ರಹ್ಮಗಿರಿಯಲ್ಲಿ ಕುಳಿತಿರುವ ಕಾವೇರಿ ತಾಯಿ ತೀರ್ಮಾನಿಸುತ್ತಾರೆ. ಅಲ್ಲದೆ, ಕಳೆದ 20 ವರ್ಷಗಳಿಂದ ನನ್ನ ಬರವಣಿಗಳನ್ನು ಓದುಕೊಂಡು ಬಂದಿರುವ ಕರ್ನಾಟಕದಲ್ಲಿರುವ ಓದುಗ ಅಭಿಮಾನಿಗಳು, ಅಲ್ಲದೆ 9 ವರ್ಷಗಳಿಂದ ದೇಶ, ಧರ್ಮ, ರಾಷ್ಟ್ರೀಯತೆ ವಿಚಾರಗಳು ಬಂದಾಗ ನಾನು ನಡೆದುಕೊಂಡಿರುವ ರೀತಿಯನ್ನು ಮತ್ತು ನನ್ನ ಕೆಲಸವನ್ನು ನೋಡಿರುವ ಕೊಡಗು- ಮೈಸೂರು ಜನ 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾನದ ಮೂಲಕ ಅವರ ತೀರ್ಪು ಅನ್ನು ನೀಡುತ್ತಾರೆ. ಈ ವಿಚಾರದಲ್ಲಿ ನಾನು ಇದಷ್ಟೆ ಹೇಳುತ್ತೇನೆ. ಈ ಬಗ್ಗೆ ಇನ್ನೇನೂ ಕೇಳಬೇಡಿ, ನಾನು ಯಾವ ವಿವರಣೆ ಕೊಡುವುದಿಲ್ಲ ಎಂದು ಪ್ರತಾಪ್ ಸಿಂಹ ತಿಳಿಸಿದರು.
ಬೆಂಗಳೂರು-ಮೈಸೂರು ಹೈವೇ ವಿಚಾರ :ಬೆಂಗಳೂರು- ಮೈಸೂರು ಹೈವೇಯನ್ನು 2018ರಲ್ಲಿ ಮಹಾರಾಜ ಕಾಲೇಜಿನ ಮೈದಾನದಲ್ಲಿ ಘೋಷಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಮರುದಿನವೇ ಆರು ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಕೇಂದ್ರ ಸಚಿವ ನಿತಿನ್ ಗಡ್ಕರಿ ಭೂಮಿ ಪೂಜೆ ನೆರವೇರಿಸಿದ್ದರು. ರಾಮನಗರದ ಬಳಿ ನೀರು ತುಂಬಿಕೊಂಡಾಗ ಪ್ರತಾಪಸಿಂಹನನ್ನು ಬೈದಿದ್ದರು. ಅದನ್ನು ಮತ್ತೆ ಸರಿಪಡಿಸಿರುವುದು ಪ್ರತಾಪ ಸಿಂಹ. ಮಂಡ್ಯದ ಬಳಿ ರಸ್ತೆ ಬಿರುಕು ಬಿಟ್ಟಾಗ ಬೈದಿದ್ದು ಪ್ರತಾಪ ಸಿಂಹನಿಗೆ. ಅದನ್ನು ಸರಿಪಡಿಸಿದ್ದು ಸಹ ಪ್ರತಾಪ ಸಿಂಹ. ನಿಡಗಟ್ಟದ ಬಳಿ ರಸ್ತೆ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದು ಕೂಡ ಪ್ರತಾಪ ಸಿಂಹ. ಕಾಳೇನಹಳ್ಳಿ ಕ್ವಾರಿ ಕೊಡಿಸಿದ್ದು ಯಾರು? ಎಂದು ಅವರು ಪ್ರಶ್ನಿಸಿದರು.
ಈ ಎಲ್ಲ ಸಂದರ್ಭದಲ್ಲಿ ಸಿದ್ದರಾಮಯ್ಯ, ಮಹದೇವಪ್ಪ ಎಲ್ಲಿ ಹೋಗಿದ್ರು? ಹೈವೇಗೆ ಖರ್ಚಾಗಿದ್ದು ಎಂಟೂವರೆ ಸಾವಿರ ಕೋಟಿ ರೂಪಾಯಿ. 800 ರೂ. ಕೊಟ್ಟಿದ್ದರೆ ಸಿದ್ದರಾಮಯ್ಯ, ಮಹದೇವಪ್ಪ ಕೊಟ್ಟಿದ್ರೆ ಹೇಳಲಿ? ಆಗ ಸಿದ್ದರಾಮಯ್ಯ ಮಹದೇವಪ್ಪ ಜೋಡಿ ರಸ್ತೆ ಅಂತ ಮಾಡುತ್ತೇವೆ. ಇದು ನನ್ನ ರಸ್ತೆಯಲ್ಲ. ನರೇಂದ್ರ ಮೋದಿ ಅವರ ರಸ್ತೆ, ಅದನ್ನು ಮಂಡ್ಯ, ಚನ್ನಪಟ್ಟಣ, ರಾಮನಗರ, ಮದ್ದೂರು, ಬೆಂಗಳೂರಿನ ಜನ ಗುರುತಿಸುತ್ತಿದ್ದಾರೆ. ನಾನೊಬ್ಬ ಮೇಸ್ತ್ರಿ, ಕೆಲಸಗಾರ ಅಷ್ಟೆ. ಮೋದಿ ಅವರು ಕೊಟ್ಟಿದ್ದ ಕೆಲಸ ಅಚ್ಚುಕಟ್ಟಾಗಿ ಮಾಡಿದ್ದೇವೆ. ಓಡಾಡುವ ಜನಕ್ಕೆ ಆ ರಸ್ತೆ ಯಾವುದು ಅಂತ ಗೊತ್ತಿದೆ ಎಂದು ತಿರುಗೇಟು ನೀಡಿದರು.