ಮೈಸೂರು:ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ತನ್ನ ವೈಫಲ್ಯಗಳನ್ನು ಮರೆಮಾಚಲು ಸರ್ಜಿಕಲ್ ಸ್ಟ್ರೈಕ್ ವಿಷಯವನ್ನು ಮುನ್ನಲೆಗೆ ತಂದಿದೆ ಎಂದು ಸಂಸದ ಆರ್.ಧ್ರುವನಾರಾಯಣ್ ಟೀಕಿಸಿದರು.
ಇಂದಿರಾ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಪದವೀಧರ ಮತ್ತು ಶಿಕ್ಷಕರ ಕಾಂಗ್ರೆಸ್ ಘಟಕ ಉದ್ಘಾಟಿಸಿ ಮಾತನಾಡಿದರು. ಯೋಧರ ಸರ್ಜಿಕಲ್ ಸ್ಟ್ರೈಕ್ ಕುರಿತು ನಮ್ಮ ಅಪಸ್ವರವಿಲ್ಲ. ಆದರೆ ನರೇಂದ್ರ ಮೋದಿ ಅವರ ಅವಧಿಯಲ್ಲಿ ಭಯೋತ್ಪಾದನೆ ಹೆಚ್ಚಿದ್ದು ಹೇಗೆ. ಉಗ್ರರು ಒಳಗೆ ನುಗ್ಗದಂತೆ ತೆಡೆಯುವ ಶಕ್ತಿ ಇವರಿಗೆ ಇರಲಿಲ್ಲವೆ. ನಮ್ಮ ಮಿಲಿಟರಿ ಮೇಲೆ ದಾಳಿ ಮಾಡುವಷ್ಟು ಭದ್ರತೆ ಲೋಪ ಉಂಟಾಗಿದ್ದು ಹೇಗೆ ಎಂದು ಪ್ರಶ್ನಿಸಿದರು.
ಕಳೆದ ನಾಲ್ಕೂವರೆ ವರ್ಷಗಳಿಂದ ರೈತರ ಕುರಿತು ಏನನ್ನೂ ಮಾಡದ ಮೋದಿ ಸರ್ಕಾರ ಕೊನೆ ಗಳಿಗೆಯಲ್ಲಿ ಚುನಾವಣೆ ಕಾರಣಕ್ಕೆ ರೈತರ ಖಾತೆಗೆ 6 ಸಾವಿರ ರೂಪಾಯಿ ಹಾಕಲು ಹೊರಟಿದೆ. ಇದು ರೈತರ ಕುರಿತ ನಿಜವಾದ ಕಾಳಜಿಯಲ್ಲ. ಪ್ರಣಾಳಿಕೆಯಲ್ಲಿ ಹೇಳಿದ ಮಾತುಗಳನ್ನು ಉಳಿಸಿಕೊಳ್ಳುವಲ್ಲಿ ಮೋದಿ ಸರ್ಕಾರ ಸೋತಿದೆ. ಅವರ ವೈಫಲ್ಯಗಳನ್ನು ಜನರಿಗೆ ತಿಳಿಸುವ ಕೆಲಸ ಆಗಬೇಕಿದೆ ಎಂದು ಧ್ರುವನಾರಾಯಣ್ ಎಂದರು.