ಮೈಸೂರು: ಸಂಸದ ಪ್ರತಾಪ್ ಸಿಂಹ ಹಾಗೂ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರ ನಡುವಿನ ಜಟಾಪಟಿ ಮತ್ತಷ್ಟು ತಾರಕಕ್ಕೇರಿದ್ದು, ತಾಕತ್ತಿದ್ದರೆ ಪ್ರತಾಪ್ ಸಿಂಹ ಪಂಚಾಯತ್ ಚುನಾವಣೆಯಲ್ಲಿ ನಿಂತು ಗೆಲ್ಲಲಿ ಎಂದು ಶಾಸಕ ನಾಗೇಂದ್ರ ಸವಾಲು ಹಾಕಿದರು.
ನಜರ್ಬಾದ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಎಲ್.ನಾಗೇಂದ್ರ ಅವರು, ನಮ್ಮೂರಲ್ಲಿ ನಾನು ರಾಜಕಾರಣ ಮಾಡಿದ್ದೇನೆ. ಎಲ್ಲಿಂದಲೋ ಬಂದು ರಾಜಕಾರಣ ಮಾಡೋದಲ್ಲ. 25 ವರ್ಷದಿಂದ ನಾನು ನಿರಂತರವಾಗಿ ಜನರ ಜತೆ ಇದ್ದೇನೆ. ನಾನು ನಿಮ್ಮ ರೀತಿ ಎಲ್ಲಿಂದಲೋ ಬಂದು ರಾಜಕಾರಣ ಮಾಡ್ತಿಲ್ಲ. ನಿಮ್ಮೂರಿನ ಒಂದು ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೆದ್ದು ತೋರಿಸಿ ಎಂದು ಸವಾಲು ಹಾಕಿದರು.
ನೀವು ಸಂಸದರಾಗಿ 7 ವರ್ಷ ಆಯ್ತು. ನಿಮ್ಮ ನಾಯಕತ್ವದಲ್ಲಿ ಎಷ್ಟು ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಗೆಲ್ಲಿಸಿದ್ದೀರಿ? ಎಂದು ಪ್ರಶ್ನಿಸಿದರು. ನೀವೇ ಮುಂದೆ ನಿಂತುಕೊಂಡು 6 ಕಾರ್ಪೊರೇಟರ್ಗಳಿಗೆ ಟಿಕೆಟ್ ಕೊಡಿಸಿದ್ರಲ್ಲ, ಎಷ್ಟು ಜನ ಗೆಲ್ಸಿದ್ರಿ ?, ಎಂಎಲ್‌ಸಿ ಚುನಾವಣೆಯಲ್ಲಿ ರಘು ಕೌಟಿಲ್ಯ ಯಾಕೆ ಸೋತರು ?, ಹಾದಿ ಬೀದಿಯಲ್ಲಿ ನಿಂತು ಮಾತನಾಡೋದು ರಾಜಕಾರಣವಲ್ಲ ಎಂದು ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದರು.
ಪೈಪ್‌ಲೈನ್ ಮೂಲಕ ಗ್ಯಾಸ್ ಸರಬರಾಜು ಯೋಜನೆಗೆ ರಸ್ತೆ ಅಗೆಯೋದು-ಮುಚ್ಚೋದು ಆ ಕಂಪನಿಯ ಜವಾಬ್ದಾರಿ. ಆದ್ರೆ ಪ್ರತಾಪ್ ಸಿಂಹಗೆ ಯಾಕಿಷ್ಟು ಆಸಕ್ತಿ ?. ಗ್ಯಾಸ್ ಕೊಡುವ ಯೋಜನೆಗೆ ನನ್ನ ವಿರೋಧ ಇಲ್ಲ. ಆ ಕಂಪನಿ ಯಾವುದು?, ಯಾರದ್ದು? ಅಂತಾ ಕಾರ್ಪೊರೇಟರ್ಗಳಿಗೆ ಗೊತ್ತಿಲ್ಲ ಎಂದು ಕುಟುಕಿದರು.