ಮೈಸೂರು: ಮೈಸೂರು ಜಿಲ್ಲಾ ಹಾಲು ಒಕ್ಕೂಟವು (ಮೈಮುಲ್) ಇಂದಿನಿಂದ (ಏಪ್ರಿಲ್ 1) ರೈತರಿಂದ ಖರೀದಿ ಮಾಡುವ ಹಾಲಿನ ದರವನ್ನು ಪ್ರತಿ ಲೀಟರ್ಗೆ 2 ರೂಪಾಯಿ ಏರಿಕೆ ಮಾಡಿದೆ. ಈ ಮೂಲಕ ರೈತರಿಗೆ ಯುಗಾದಿ ಉಡುಗೊರೆ ನೀಡಿದೆ.
ಮೈಸೂರು ಜಿಲ್ಲಾ ಹಾಲು ಒಕ್ಕೂಟ ಬೇಸಿಗೆ ಪ್ರಾರಂಭವಾಗಿರುವುದರಿಂದ ಹಸುಗಳಿಗೆ ಹಸಿರು ಮೇವಿನ ಲಭ್ಯತೆ ಕಡಿಮೆಯಾಗಿದೆ. ಇದರಿಂದ ಹಾಲಿನ ಉತ್ಪಾದನೆ ಪ್ರಮಾಣ ಕುಸಿದಿದ್ದು, ಹಾಲು ಶೇಖರಣೆ ಹೆಚ್ಚು ಮಾಡಲು ಹಾಗೂ ಜಾನುವಾರುಗಳನ್ನು ಸಾಕಣೆ ಮಾಡಲು ರೈತರಿಗೆ ಅನುಕೂಲವಾಗಲಿ ಎಂದು ಖರೀದಿ ದರವನ್ನು 2 ರೂಪಾಯಿ ಹೆಚ್ಚಳ ಮಾಡಲಾಗಿದೆ ಎಂದು ಮೈಮುಲ್ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
ಹಾಲು ಉತ್ಪಾದನೆ ಹೆಚ್ಚಿಸಲು ಈ ನಿರ್ಧಾರ:ಮೈಸೂರು ಜಿಲ್ಲೆಯಲ್ಲಿ 2.19 ಲಕ್ಷ ಹಾಲು ಉತ್ಪಾದಕ ರೈತರಿದ್ದಾರೆ. ಜೊತೆಗೆ 1,123 ಪ್ರಾಥಮಿಕ ಹಾಲು ಉತ್ಪಾದಕ ಸಹಕಾರ ಸಂಘಗಳಿಂದ ನಿತ್ಯ 6.08 ಲಕ್ಷ ಲೀಟರ್ ಹಾಲು ಸಂಗ್ರಹ ಮಾಡಲಾಗುತ್ತಿದೆ. ಹಾಲು ಉತ್ಪಾದನೆ ಹೆಚ್ಚಿಸಲು ಮತ್ತು ರೈತರಿಗೆ ಅನುಕೂಲವಾಗಲಿ ಎಂದು ಒಕ್ಕೂಟದ ಆಡಳಿತ ಮಂಡಳಿ ಜೊತೆ ಸಭೆ ನಡೆಸಿ ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಸಿದ್ಧಗಂಗಾ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಮಗುವಿಗೆ 'ಶಿವಮಣಿ' ಹೆಸರು
ಈ ಹಿಂದೆ ಮೈಮುಲ್ ಒಕ್ಕೂಟವು ರೈತರಿಂದ ಪ್ರತಿ ಲೀಟರ್ಗೆ 27 ರೂಪಾಯಿ 20 ಪೈಸೆ ನೀಡಿ ಹಾಲನ್ನು ಖರೀದಿ ಮಾಡುತ್ತಿತ್ತು. ಈಗ ಪ್ರತಿ ಲೀಟರ್ಗೆ 2 ರೂಪಾಯಿ ಏರಿಕೆ ಮಾಡಿರುವುದರಿಂದ 29.20 ರೂಪಾಯಿ ನೀಡಿ ಹಾಲು ಖರೀದಿಸಲಿದೆ. ಇದರ ಜೊತೆಗೆ ಸರ್ಕಾರದ 5 ರೂಪಾಯಿ ಸಬ್ಸಿಡಿ ಪ್ರತ್ಯೇಕವಾಗಿ ಸಿಗಲಿದೆ. ಉತ್ತಮ ಗುಣಮಟ್ಟದ ಹಾಲು ನೀಡುವ ರೈತರಿಗೆ ಪ್ರತಿ ಲೀಟರ್ಗೆ 30.75 ರೂ.ಗಳ ವರೆಗೆ ಸಿಗಲಿದೆ. ಯುಗಾದಿ ಹಬ್ಬದ ಕೊಡುಗೆಯಾಗಿ ಹಾಲಿನ ಖರೀದಿ ದರವನ್ನು ಹೆಚ್ಚಿಸಲಾಗಿದ್ದು. ರೈತರು ಗುಣಮಟ್ಟದ ಹಾಲು ಉತ್ಪಾದಿಸಲು ಸಹಕಾರಿಯಾಗಲಿದೆ ಎಂದು ಮೈಮುಲ್ ಅಧ್ಯಕ್ಷ ಪಿ.ಎಂ. ಪ್ರಸನ್ನ ತಿಳಿಸಿದ್ದಾರೆ.