ಮೈಸೂರು: ಮೇಯರ್ ಹಾಗೂ ಉಪಮೇಯರ್ ಸ್ಥಾನಗಳಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಐದು ವರ್ಷಗಳ ಕಾಲ ಒಪ್ಪಂದವಾಗಿತ್ತು. ಆದರೆ ಬದಲಾದ ರಾಜಕೀಯ ಸನ್ನಿವೇಶದಿಂದ ತಟಸ್ಥವಾಗಿರಬೇಕು ಎಂದು ನಗರ ಪಾಲಿಕೆ ಜೆಡಿಎಸ್ ಸದಸ್ಯರು ಇಚ್ಛಿಸಿದ್ದಾರೆ. ನಮ್ಮ ಪಕ್ಷದ ಹೈಕಮಾಂಡ್ ಯಾವ ಸೂಚನೆ ನೀಡುತ್ತದೆಯೋ ಅದನ್ನು ಪಾಲಿಸುತ್ತೇವೆ ಎಂದು ಶಾಸಕ ಸಾ.ರಾ.ಮಹೇಶ್ ತಿಳಿಸಿದ್ದಾರೆ.
ಮೇಯರ್ ಅತಿಥಿ ಗೃಹದಲ್ಲಿ ಶಾಸಕ ಸಾ.ರಾ.ಮಹೇಶ್ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ ನಗರ ಪಾಲಿಕೆಯ ಜೆಡಿಎಸ್ ಸದಸ್ಯರು, ಮೇಯರ್ ಚುನಾವಣೆಯಲ್ಲಿ ತಟಸ್ಥವಾಗಿದ್ದು ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳೋಣವೆಂದು ಹೇಳಿದ್ದಾರೆ.
ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಪಕ್ಷಗಳಲ್ಲಿ ಯಾರೊಂದಿಗೆ ಕೈಜೋಡಿಸಬೇಕು ಎಂಬ ಗೊಂದಲದಲ್ಲಿ ಜೆಡಿಎಸ್ ಇದೆ.
ಓದಿ:ನಮ್ಮದು ಆರ್ಎಸ್ಎಸ್ ಹಿನ್ನೆಲೆಯ ಕುಟುಂಬ: ಸಚಿವ ರಮೇಶ್ ಜಾರಕಿಹೊಳಿ
ಮೇಯರ್ ಗದ್ದುಗೆ ಹಿಡಿಯಲು ಮೂರೂ ಪಕ್ಷಗಳಿಗೂ ಸಂಖ್ಯಾಬಲ ಕಡಿಮೆ ಇರುವುದರಿಂದ ಕಾಂಗ್ರೆಸ್ ಹಾಗೂ ಬಿಜೆಪಿಗೆ ಜೆಡಿಎಸ್ ಅನಿವಾರ್ಯವಾಗಿದೆ. ಆದರೆ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಬಂದಾಗ ಮೈಸೂರು ಮಹಾನಗರ ಪಾಲಿಕೆಯಲ್ಲಿ ಐದು ವರ್ಷಗಳ ಕಾಲ ಇವೆರಡು ಪಕ್ಷಗಳ ನಡುವೆ ಮೇಯರ್ ಹಾಗೂ ಉಪಮೇಯರ್ ಸ್ಥಾನಗಳಿಗೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಬದಲಾದ ರಾಜಕೀಯ ಸನ್ನಿವೇಶದಿಂದ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈಸೂರು ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಮೈತ್ರಿ ಮುಂದುವರಿಯುವುದು ಅನುಮಾನವಾಗಿದೆ.