ಈಟಿವಿ ಭಾರತ ಜೊತೆ ದೇವರಾಜೇಗೌಡ ಪ್ರತಿಕ್ರಿಯೆ ಮೈಸೂರು :ಸಂಸತ್ ನಮಗೆ ದೇಗುಲ ಇದ್ದಂತೆ.ನನ್ನ ಮಗ ಮನೋರಂಜನ್ ಸಂಸತ್ ಭವನಕ್ಕೆ ನುಗ್ಗಿರುವುದು ತಪ್ಪು. ಇದನ್ನು ನಾನು ಒಬ್ಬ ತಂದೆಯಾಗಿ ಖಂಡಿಸುತ್ತೇನೆ, ಇಂತಹ ಕೆಲಸ ಯಾರೂ ಮಾಡಬಾರದು ಎಂದು ಮನೋರಂಜನ್ ತಂದೆ ದೇವರಾಜೇಗೌಡ ಹೇಳಿದ್ದಾರೆ.
ಲೋಕಸಭೆ ಕಲಾಪ ನಡೆಯುತ್ತಿರುವ ವೇಳೆ ಸದನಕ್ಕೆ ನುಗ್ಗಿದ ನಾಲ್ವರು ಬಂಧಿತರ ಪೈಕಿ ಮೈಸೂರು ಮೂಲದ ಮನೋರಂಜನ್ ಒಬ್ಬ ಎನ್ನಲಾಗಿದ್ದು, ಈ ಕುರಿತು ಮನೋರಂಜನ್ ತಂದೆ ದೇವರಾಜೇಗೌಡ ತಮ್ಮ ಮಗನ ಬಗ್ಗೆ ಈಟಿವಿ ಭಾರತ ಜೊತೆ ಮಾತನಾಡಿದ್ದಾರೆ.
''ನನ್ನ ಮಗ ಮನೋರಂಜನ್ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಓದಿದ್ದಾನೆ. ದೇವೇಗೌಡ ಅವರೇ ನನ್ನ ಮಗನಿಗೆ ಸೀಟ್ ಕೊಡಿಸಿದ್ದರು. ಆತನಿಗೆ ಬುಕ್ಸ್ ಓದುವುದು ಹವ್ಯಾಸವಿತ್ತು. ಯಾವುದಕ್ಕೂ ಆಸೆ ಪಡುತ್ತಿರಲಿಲ್ಲ. ಸಮಾಜಸೇವೆ ಮಾಡಬೇಕು ಎಂದು ಹೇಳುತ್ತಿದ್ದ. ಆತನ ಮನಸ್ಸಿನಲ್ಲಿ ಏನಿದೆ ಎಂದು ನನಗೆ ಗೊತ್ತಾಗುತ್ತಿರಲಿಲ್ಲ. ಈ ರೀತಿ ಮಾಡಿರುವುದು ಖಂಡನೀಯ. ನಾವು ರೈತ ಕುಟುಂಬದಿಂದ ಬಂದವರು, ಎಲ್ಲರಿಗೂ ಒಳ್ಳೆಯದನ್ನು ಮಾಡಬೇಕು ಎಂಬ ಬಯಕೆ ಹೊಂದಿದ್ದ'' ಎಂದರು.
''ಇಂತಹ ಕೆಲಸ ಮಗ ಮಾಡಿರಲಿ, ಯಾರೇ ಮಾಡಿರಲಿ ಖಂಡನೀಯ. ನನ್ನ ಮಗನಿಗೆ ಸಂಘಟನೆ ಮಾಡಬೇಕು ಎಂಬ ಆಸೆ ಇತ್ತು. ರೈತರು, ಬಡವರಿಗೆ ಸಹಾಯ ಮಾಡಬೇಕು ಎಂಬ ಮಹದಾಸೆ ಹೊಂದಿದ್ದ. ಆತ ಎಲ್ಲಿಗೆ ಹೋಗುತ್ತಿದ್ದ ಎಂಬುದು ನನಗೆ ಗೊತ್ತಿರಲಿಲ್ಲ. ದೆಹಲಿಗೆ ಹೋಗುತ್ತೇನೆ ಎಂದು ಕಳೆದ ಎರಡು ದಿನಗಳ ಹಿಂದೆ ಹೋಗಿದ್ದ. ಬಿಐಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮಾಡಿದ್ದ. ಈ ಕೆಲಸ ಯಾರೇ ಮಾಡಿದರೂ ಖಂಡನೀಯ'' ಎಂದು ತಂದೆ ದೇವರಾಜೇಗೌಡ ಭಾವುಕರಾದರು.
ಮಾಧ್ಯಮದವರ ಜೊತೆ ದೇವರಾಜೇಗೌಡ ಪ್ರತಿಕ್ರಿಯೆ ''ಸಾಮಾಜಿಕವಾಗಿ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಕೆಲಸವನ್ನು ಮಾಡುತ್ತಿದ್ದ, ಆತ ಯಾವುದೇ ಸಮಾಜಘಾತುಕ ಚಟುವಟಿಕೆ ಮಾಡುವವನಲ್ಲ. ನನ್ನ ಮಗ ಇರಲಿ, ಯಾರೇ ತಪ್ಪು ಮಾಡಿದ್ದರೂ ಗಲ್ಲಿಗೇರಿಸಲಿ. ಪ್ರಧಾನಿ ನರೇಂದ್ರ ಮೋದಿ ಮೇಲೆ ಮಗನಿಗೆ ಅಭಿಮಾನ ಇದೆ. ನಾವು ಯಾವುದೇ ಪಕ್ಷದಲ್ಲಿ ಇದ್ದವರಲ್ಲ. ಮನೋರಂಜನ್ ಎಲ್ಲಿಗೆ ಹೋದರೂ ಮರಳಿ ಎರಡು-ಮೂರು ದಿನಗಳಲ್ಲೇ ಮನೆಗೆ ಬರುತ್ತಿದ್ದ. ಸಮಾಜಕ್ಕೆ ಮಕ್ಕಳು ಒಳ್ಳೆಯದು ಮಾಡಲಿ ಎಂಬುದು ಎಲ್ಲ ತಂದೆ- ತಾಯಿಯ ಆಸೆ. ಅದರಂತೆ ನಾವೂ ಕೂಡ ನಮ್ಮ ಮಗನಿಗೆ ಓದಿಸಿದ್ದೇವೆ. ನಮ್ಮ ತೋಟದಲ್ಲಿ ಕೆಲಸ ಮಾಡಿಕೊಂಡಿರುವಂತೆ ನಾನು ಆತನಿಗೆ ಬುದ್ದಿ ಹೇಳಿದ್ದೆ. ಆದರೆ ಈಗ ಯಾಕೆ ಹೀಗೆ ಮಾಡಿದ್ದಾನೆಂದು ತಿಳಿಯುತ್ತಿಲ್ಲ. ಜಾಸ್ತಿ ಓದಿರುವುದೇ ಆತನಿಗೆ ತಿರುವಾಯ್ತಾ ಎಂದು ಗೊತ್ತಾಗುತ್ತಿಲ್ಲ'' ಎಂದು ಹೇಳಿದರು.
ಇದನ್ನೂ ಓದಿ:ಲೋಕಸಭೆಯಲ್ಲಿ ಭದ್ರತಾ ಲೋಪ: ನಾಲ್ವರ ಬಂಧನ, ಆರೋಪಿಗಳ ಗುರುತು ಪತ್ತೆ