ಮೈಸೂರು: ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆಯ ಕನ್ನಡಕ, ಕೋಲು ಹಾಗೂ ಕೈಯನ್ನು ಮುರಿಯುವ ಮೂಲಕ, ಕಿಡಿಗೇಡಿಗಳು ದುಷ್ಕೃತ್ಯ ಮೆರೆದಿದ್ದಾರೆ.
ನಗರದ ಸ್ವಾತಂತ್ರ್ಯ ಉದ್ಯಾನವನ(ಸುಬ್ಬರಾಯನಕೆರೆ) ದಲ್ಲಿರುವ 'ದಂಡಿಯಾತ್ರೆ' ಸ್ಮಾರಕದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರ ಪ್ರತಿಮೆಗಳಿವೆ.
ಅದರಲ್ಲಿನ ಮಹಾತ್ಮ ಗಾಂಧೀಜಿ ಪ್ರತಿಮೆಯ ಕನ್ನಡಕ, ಕೋಲು, ಮುಂಗೈ ಅನ್ನು ಕಿಡಿಗೇಡಿಗಳು ಮುರಿದು ವಿಕೃತಿ ಮೆರೆಯುವ ಮೂಲಕ ಮಹಾತ್ಮ ಗಾಂಧೀಜಿಗೆ ಅಪಮಾನ ಮಾಡಿದ್ದಾರೆ.
ಈ ಉದ್ಯಾನವನದಲ್ಲಿ ಭದ್ರತೆ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ಅನೈತಿಕ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿವೆ. ಭದ್ರತಾ ಸಿಬ್ಬಂದಿಯನ್ನು ಹೆದರಿಸಿ, ಬೆದರಿಸಿ ಕಿಡಿಗೇಡಿಗಳು ತಮ್ಮ ಕೃತ್ಯ ಮುಂದುವರೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ಸ್ಥಳೀಯ ನಿವಾಸಿ ಶಿವರಾಂ 'ಈಟಿವಿ ಭಾರತ'ದೊಂದಿಗೆ ಮಾತನಾಡಿ, ಪ್ರತಿಮೆಯನ್ನು ವಿರೂಪಗೊಳಿಸಿದವರ ಮೇಲೆ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.