ಮೈಸೂರು:ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡವು ಮಂಗಳೂರು ಯುನೈಟೆಡ್ ವಿರುದ್ಧದ ಪಂದ್ಯದಲ್ಲಿ ವಿಜೆಡಿ ನಿಯಮಾನುಸಾರ 35 ರನ್‌ಗಳ ಅಂತರದಲ್ಲಿ ಜಯ ಗಳಿಸಿದೆ. ಎಲ್.ಆರ್.ಚೇತನ್ (66) ಅವರ ಸ್ಪೋಟಕ ಬ್ಯಾಟಿಂಗ್ ಹಾಗೂ ರಿಶಿ ಬೋಪಣ್ಣ (19ಕ್ಕೆ 4) ಅವರ ಸ್ಪಿನ್ ಮೋಡಿಯು ಬೆಂಗಳೂರು ತಂಡದ ಗೆಲುವಿಗೆ ನೆರವಾಯಿತು.
ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರಿಕೆಟ್ ಅಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ 9 ವಿಕೆಟ್ 186 ರನ್‌ಗಳ ಬೃಹತ್ ಮೊತ್ತ ಗಳಿಸಿತ್ತು. ಕಠಿಣ ಸವಾಲನ್ನು ಬೆನ್ನತ್ತಿದ ಮಂಗಳೂರು ಯುನೈಟೆಡ್ 17.4 ಓವರ್‌ಗಳಲ್ಲಿ 129 ರನ್ ಗಳಿಸಿ ಸೋಲಿನ ಅಂಚಿಗೆ ಸಿಲುಕಿತ್ತು.
ಈ ಸಂದರ್ಭದಲ್ಲಿ ಪಂದ್ಯಕ್ಕೆ ಮಳೆಯ ಅಡ್ಡಿಯಾದ ಕಾರಣ 17.4 ಓವರ್‌ಗಳಲ್ಲಿ 165 ರನ್ ಗುರಿ ನಿರ್ಧರಿಸಲಾಯಿತು. ಆದರೆ, ಮಂಗಳೂರು ಯುನೈಟೆಡ್ ಈ ಹಂತದಲ್ಲಿ ಕೇವಲ 129 ರನ್ ಗಳಿಸಿದ್ದರಿಂದ ಬೆಂಗಳೂರು ಬ್ಲಾಸ್ಟರ್ಸ್ 35 ರನ್ ಅಂತರದಲ್ಲಿ ವಿಜಯಿ ಎಂದು ಘೋಷಿಸಲಾಯಿತು. ಬೆಂಗಳೂರು ಬ್ಲಾಸ್ಟರ್ಸ್‌ನ ಚೇತನ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಬೆಂಗಳೂರಿನ ಬೃಹತ್ ಮೊತ್ತ: ಟಾಸ್ ಗೆದ್ದ ಮಂಗಳೂರು ಯುನೈಟೆಡ್ ಫೀಲ್ಡಿಂಗ್ ಆಯ್ದುಕೊಂಡಿತು. ಆರಂಭದಲ್ಲಿ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಮಳೆ ನಿಂತ ಬಳಿಕ ಮಯಾಂಕ್ ಅಗರ್ವಾಲ್ ಮತ್ತು ಎಲ್.ಆರ್.ಚೇತನ್ ರನ್ ಮಳೆಗರೆದರು. ಟಾಸ್ ಗೆದ್ದು ತಪ್ಪು ನಿರ್ಧಾರ ಕೈಗೊಂಡೆವೋ ಎಂದು ಒಂದು ಹಂತದಲ್ಲಿ ನಾಯಕ ಸಮರ್ಥ್‌ಗೆ ಅನಿಸದಿರದು. ಏಕೆಂದರೆ 40 ಎಸೆತಗಳಲ್ಲಿ ಈ ಇಬ್ಬರು ಆಟಗಾರರು 73 ರನ್ ಗಳಿಸಿ ಬೃಹತ್ ಮೊತ್ತಕ್ಕೆ ವೇದಿಕೆ ಹಾಕಿದ್ದರು.
ಮಯಾಂಕ್ 20 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ಮಿಂಚಿನ 44 ರನ್ ಸಿಡಿಸಿದರು. ಆದರೆ, ರೋಹಿತ್ ತಮ್ಮ ಮೊದಲ ಓವರ್‌ನಲ್ಲಿ ಮಯಾಂಕ್ ಅವರನ್ನು ಔಟ್ ಮಾಡುವ ಮೂಲಕ ಉತ್ತಮ ಜೊತೆಯಾಟವನ್ನು ಮುರಿಯುವಲ್ಲಿ ಯಶಸ್ವಿಯಾದರು. ಇತ್ತ, ಎಲ್.ಆರ್.ಚೇತನ್ ಅಬ್ಬರದ ಆಟವನ್ನು ಮುಂದುವರಿಸಿ ಮಂಗಳೂರಿನ ಬೃಹತ್ ಮೊತ್ತಕ್ಕೆ ಹಾದಿ ತೋರಿದರು.