ಕೊನೆಯ ಆಷಾಢ ಶುಕ್ರವಾರಕ್ಕೆ ಆಗಮಿಸಿದ ಭಕ್ತರು ಮೈಸೂರು:ಇಂದು ಕೊನೆಯ ಆಷಾಢ ಶುಕ್ರವಾರದ ಸಂಭ್ರಮ. ನಾಡ ಅಧಿದೇವತೆಗೆ ವಿಶೇಷ ಲಕ್ಷ್ಮೀ ಅಲಂಕಾರ ಮಾಡಲಾಗಿದ್ದು, ಇದರ ಜೊತೆಗೆ ದೇವಾಲಯದ ಒಳಭಾಗದಲ್ಲಿ ವಿವಿಧ ಬಗೆಯ ಹೂವುಗಳಿಂದ ಅಲಂಕಾರ ಮಾಡಲಾಗಿದೆ. ಭಕ್ತರು ಬೆಳಗ್ಗೆಯಿಂದಲೇ ತಾಯಿಯ ದರ್ಶನ ಪಡೆಯುತ್ತಿದ್ದು, ರಾತ್ರಿಯವರೆಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಅನುಕೂಲಕ್ಕಾಗಿ ಸರತಿ ಸಾಲಿನ ವ್ಯವಸ್ಥೆ ಹಾಗೂ ಬಿಗಿಯಾದ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೂಡ ಮಾಡಲಾಗಿದೆ.
ಗರ್ಭಗುಡಿಯ ಒಳಗಿರುವ ಮೂಲ ಚಾಮುಂಡೇಶ್ವರಿ ಮೂರ್ತಿಗೆ ಲಕ್ಷ್ಮೀ ಅಲಂಕಾರ ಮಾಡಲಾಗಿದ್ದು, ಉತ್ಸವ ಮೂರ್ತಿಗೆ ನಾಗಲಕ್ಷ್ಮೀ ಅಲಂಕಾರ ಮಾಡಿರುವುದು ಆಕರ್ಷಕವಾಗಿದೆ. ಚಾಮುಂಡಿ ಬೆಟ್ಟದಲ್ಲಿ ಕೊನೆಯ ಹಾಗೂ ನಾಲ್ಕನೇ ಆಷಾಢ ಶುಕ್ರವಾರದ ಸಂಭ್ರಮ ಮನೆ ಮಾಡಿದ್ದು, ಬೆಳಗ್ಗೆ 3:30 ರಿಂದಲೇ ಚಾಮುಂಡಿ ತಾಯಿಯ ಮೂಲ ಮೂರ್ತಿಗೆ ರುದ್ರಾಭಿಷೇಕ, ಪಂಚಾಮೃತಾಭಿಷೇಕ ಹಾಗೂ ಮಹಾಮಂಗಳಾರತಿ ನೆರವೇರಿಸಲಾಗಿದೆ.
ನಾಲ್ಕನೇ ಆಷಾಢ ಶುಕ್ರವಾರದ ನಿಮಿತ್ತ, ಹೆಚ್ಚಿನ ಭಕ್ತರು ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿ ತಾಯಿಯ ದರ್ಶನ ಪಡೆಯುತ್ತಿದ್ದಾರೆ. ಜೊತೆಗೆ ಇಂದು ಕೊನೆಯ ಆಷಾಢ ಶುಕ್ರವಾರ ಆದ್ದರಿಂದ ಚಾಮುಂಡಿ ಬೆಟ್ಟಕ್ಕೆ ಗಣ್ಯರು ಆಗಮಿಸುವ ನಿರೀಕ್ಷೆ ಇದೆ.
ಬೆಳಗ್ಗೆ 5:30 ರಿಂದ ರಾತ್ರಿ 9:30ರವರೆಗೆ ಭಕ್ತರಿಗೆ ದರ್ಶನ ವ್ಯವಸ್ಥೆ ಮಾಡಿದ್ದಾರೆ. ಇನ್ನು ಭಕ್ತರು ತಮ್ಮ ಖಾಸಗಿ ವಾಹನಗಳಲ್ಲಿ ಚಾಮುಂಡಿ ಬೆಟ್ಟಕ್ಕೆ ಬರುವುದನ್ನು ನಿಷೇಧ ಹೇರಲಾಗಿದೆ. ಬೆಟ್ಟದ ಕೆಳಭಾಗದ ಲಲಿತ್ ಮಹಲ್ ಮೈದಾನದಿಂದ ಉಚಿತ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಗ್ಗೆಯಿಂದ ರಾತ್ರಿ 8:30 ರವರೆಗೆ ಉಚಿತ ಬಸ್ ಸೇವೆ ವ್ಯವಸ್ಥೆ ಇದ್ದು, ಭಕ್ತರು ತಮ್ಮ ಖಾಸಗಿ ವಾಹನಗಳನ್ನು ಲಲಿತ್ ಮಹಲ್ ಮೈದಾನದ ಪಕ್ಕದಲ್ಲಿ ಪಾರ್ಕಿಂಗ್ ಮಾಡಿ, ಬಸ್ನಲ್ಲಿ ಉಚಿತವಾಗಿ ಪ್ರಯಾಣಿಸಿ ದರ್ಶನ ಪಡೆಯಬಹುದು. ಭಕ್ತರ ಅನುಕೂಲಕ್ಕಾಗಿ ಚಾಮುಂಡಿ ಬೆಟ್ಟದಲ್ಲಿ ವಿಶೇಷವಾಗಿ ಬ್ಯಾರಿಕೆಡ್ ವ್ಯವಸ್ಥೆ ಹಾಕಲಾಗಿದ್ದು, ಡಿಸಿಪಿ ಮುತ್ತುರಾಜ್ ನೇತೃತ್ವದಲ್ಲಿ ಬಿಗಿಯಾದ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ರೇವತಿ ನಕ್ಷತ್ರದಲ್ಲಿ ಜರುಗಿತ್ತು ವರ್ಧಂತಿ ಉತ್ಸವ: ಜುಲೈ 10 ರಂದು ವಿಜೃಂಭಣೆಯಿಂದ ಆಷಾಢ ಮಾಸದ ಕೃಷ್ಣ ಪಕ್ಷ ರೇವತಿ ನಕ್ಷತ್ರದಲ್ಲಿ, ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿಯ ವರ್ಧಂತಿ ಮಹೋತ್ಸವ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಸಂಭ್ರಮದಿಂದ ಜರುಗಿತ್ತು. ಈ ವರ್ಧಂತಿಗೆ ರಾಜ ವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ರಾಜ ಮಾತೆ ಪ್ರಮೋದಾದೇವಿ ಒಡೆಯರ್ ಹಾಗೂ ರಿಷಿಕಾ ಒಡೆಯರ್ ಚಿನ್ನದ ಪಲ್ಲಕ್ಕಿಯಲ್ಲಿ ನಾಡ ಅಧಿದೇವತೆಯ ಉತ್ಸವ ಮೂರ್ತಿಯ ಮೆರವಣಿಗೆಗೆ ಚಾಲನೆ ನೀಡಿದ್ದರು. ಆ ದಿನದಂದು ದೇವಾಲಯದ ಒಳಭಾಗದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಮೈಸೂರಿನ ರಾಜವಂಶಸ್ಥರು ಚಾಮುಂಡಿ ಬೆಟ್ಟಕ್ಕೆ ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿಯ ಪ್ರತಿಷ್ಠಾಪನೆ ಮಾಡಿದ ದಿನವೇ ವರ್ಧಂತಿ ಮಹೋತ್ಸವ ದಿನ.
ಇದನ್ನೂ ಓದಿ:ರೇವತಿ ನಕ್ಷತ್ರದಲ್ಲಿ ಜರುಗಿದ ಮೈಸೂರು ಚಾಮುಂಡೇಶ್ವರಿ ವರ್ಧಂತಿ ಉತ್ಸವ..