ಮೈಸೂರು :ಮಹಮ್ಮದ್ ನಲಪಾಡ್ ಮಾಲೀಕತ್ವದ ಹೋಟೆಲ್ ಅನ್ನು ಸಯ್ಯದ್ ರಿಯಾಜ್ ಅವರಿಂದ ಮೂರು ವರ್ಷಗಳ ಕಾಲ ಹೋಟೆಲ್ ಜಾಗವನ್ನ ಉಪಗುತ್ತಿಗೆ ತೆಗೆದುಕೊಂಡಿದ್ದು, ಈಗ ಅವಧಿಗೂ ಮುನ್ನ ಜಾಗ ಖಾಲಿ ಮಾಡುವಂತೆ ಧಮ್ಕಿ ಹಾಕಿ ನನ್ನ ವಿರುದ್ಧ ಪಿತೂರಿ ನಡೆಸಿದ್ದಾರೆ. ಆದರೆ, ನಾನು ನನ್ನ ಅಗ್ರಿಮೆಂಟ್ ಅವಧಿ ಮುಗಿಯುವವರೆಗೂ ಜಾಗ ಖಾಲಿ ಮಾಡುವುದಿಲ್ಲ ಎಂದು ಸಯ್ಯದ್ ರಿಯಾಜ್ ಅವರಿಗೆ ಉಪ ಗುತ್ತಿಗೆ ಪಡೆದಿರುವ ಕೃತಿಕಾ ಗೌಡ ಚಾಲೆಂಜ್ ಹಾಕಿದ್ದಾರೆ.
ಈಟಿವಿ ಭಾರತನೊಂದಿಗೆ ಮಾತನಾಡಿದ ಕೇಸರಿ ರೆಸ್ಟೋರೆಂಟ್ನ ಉಪ ಗುತ್ತಿಗೆ ಪಡೆದ ಕೃತಿಕಾ ಗೌಡ ಅವರು, ನಾನು ಮಹಮ್ಮದ್ ನಲಪಾಡ್ ಅವರ ಹೋಟೆಲ್ ಅನ್ನು ಸಯ್ಯದ್ ರಿಯಾಜ್ ಎನ್ನುವವರಿಂದ 3 ವರ್ಷಗಳ ಕಾಲ ಉಪಗುತ್ತಿಗೆ ಪಡೆದಿದ್ದೇನೆ. ಆದರೆ, ನಾನು ಹೋಟೆಲ್ ತೆಗೆದುಕೊಂಡು ಒಂದು ವರ್ಷ ಆಗಿದೆ. ಆದರೆ, ಅವಧಿಗೂ ಮುನ್ನವೇ ಹೋಟೆಲ್ ಜಾಗ ಖಾಲಿ ಮಾಡುವಂತೆ ಧಮ್ಕಿ ಹಾಕಿದ್ದಾರೆ. ನನ್ನ ಮೇಲೆ ದೌರ್ಜನ್ಯ ಮಾಡಿದ್ದಾರೆ. ಇದಲ್ಲದೆ ನನ್ನ ರೆಸ್ಟೋರೆಂಟ್ ಸಿಬ್ಬಂದಿಯನ್ನು ನನ್ನ ವಿರುದ್ಧವೇ ಎತ್ತು ಕಟ್ಟಿದ್ದಾರೆ ಎಂದು ಸಯ್ಯದ್ ರಿಯಾಜ್ ವಿರುದ್ಧ ಆರೋಪಿಸಿದರು.
ಕೇಸರಿ ರೆಸ್ಟೋರೆಂಟ್ ಹೆಸರು ಬದಲಾಯಿಸುವಂತೆ ಒತ್ತಡ :ಮೊದಲು ಜಾಗಕ್ಕೆ ಕಾಮತ್ ಎಂದು ಹೆಸರಿತ್ತು, ನಾನು ಗುತ್ತಿಗೆ ತೆಗೆದುಕೊಳ್ಳುವ ಮೊದಲೇ ಇದಕ್ಕೆ ಕೇಸರಿ ರೆಸ್ಟೋರೆಂಟ್ ಎಂದು ಹೆಸರಿಟ್ಟಿದ್ದರು. ಆದರೆ, ಕಳೆದ ಫೆಬ್ರವರಿಯಿಂದ ಕೇಸರಿ ರೆಸ್ಟೋರೆಂಟ್ ಹೆಸರು ಬದಲಾಯಿಸುವಂತೆ ಒತ್ತಡ ಹೇರುತ್ತಿದ್ದರು, ವಾಸ್ತು ಸರಿಯಿಲ್ಲ, ವ್ಯಾಪಾರ ಜಾಸ್ತಿಯಾಗುತ್ತಿಲ್ಲ. ರೆಸ್ಟೋರೆಂಟ್ ಹೆಸರು ಬದಲಾಯಿಸಿ ಎನ್ನುತ್ತಿದ್ದರು. ನಂತರ ಹಿಜಾಬ್ ವಿಚಾರವನ್ನು ಇದರಲ್ಲಿ ತಂದು ಒತ್ತಡ ಹೇರುತ್ತಿದ್ದರು.