ಮೈಸೂರು: ಮುಂದಿನ ವಿಧಾನಸಭಾ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಇಬ್ಭಾಗವಾಗುತ್ತದೆ. ಇದರಲ್ಲಿ ಯಾವುದೇ ರೀತಿಯ ಅನುಮಾನ ಬೇಡ ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ನಗರದ ಬಸವೇಶ್ವರ ವೃತ್ತದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ಗೂ ಅಧಿಕಾರ ಬೇಕು, ಮಾಜಿ ಸಿಎಂ ಸಿದ್ದರಾಮಯ್ಯಗೂ ಅಧಿಕಾರ ಬೇಕು. ಇದರಿಂದ ಕಾಂಗ್ರೆಸ್ ಎರಡು ಭಾಗವಾಗುತ್ತದೆ. ಅದಕ್ಕಾಗಿ ಒಂದೂವರೆ ವರ್ಷ ಕಾಯುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ ಸಿದ್ದರಾಮಯ್ಯಗೆ ಹೇಗಾದರೂ ಸರಿ ಸಿಎಂ ಆಗಬೇಕು ಎನ್ನುವ ಹುಚ್ಚು, ಡಿ.ಕೆ ಶಿವಕುಮಾರ್ಗೆ ಬಿಜೆಪಿಯವರನ್ನ ಹೇಗಾದರೂ ಮಾಡಿ ಎಳೆದುಕೊಳ್ಳಬೇಕು ಅನ್ನುವ ಹುಚ್ಚು. ಈ ಇಬ್ಬರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ವ್ಯಂಗ್ಯವಾಡಿದರು.
ಜಾತಿ ಗಣತಿ ವಿಚಾರವಾಗಿ ಮಾತನಾಡಿದ ಈಶ್ವರಪ್ಪ, ಸಿದ್ದರಾಮಯ್ಯನವರು ಸಂಘಟನೆ ಮಾಡಲು ಅಡ್ಡದಾರಿ ತುಳಿದಿದ್ದಾರೆ. ಸದನದಲ್ಲಿ ಅವರು ಜಾತಿಗಣತಿ ಬಗ್ಗೆ ಯಾಕೆ ಮಾತನಾಡಿಲ್ಲ. ಸಿದ್ದರಾಮಯ್ಯನವರೇ ನಿಮ್ಮ ಬಾಯಲ್ಲಿ ಕಡುಬು ಇಟ್ಟುಕೊಂಡಿದ್ದಿರಾ? ಎಂದು ಕುಟುಕಿದರು.
ಹಿಂದುಳಿದವರು, ಅಲ್ಪಸಂಖ್ಯಾತರು ನಿಮಗೆ ಹೆಸರಿಗೆ ಮಾತ್ರವೇ?, ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಜಾತಿ ಗಣತಿ ವರದಿ ಸಿದ್ಧವಾಗಿದ್ದರೂ ಕುಮಾರಸ್ವಾಮಿ ಯಾಕೆ ಮಂಡಿಸಲಿಲ್ಲ?, ಆಗ ನಿಮ್ಮ ಬೆಂಬಲ ವಾಪಸ್ ಪಡೆಯಬೇಕಿತ್ತು. ಆದರೆ ಯಾಕೆ ತೆಗೆದುಕೊಳ್ಳಲಿಲ್ಲ? ಎಂದು ಪ್ರಶ್ನಿಸಿದರು. ಇವರಿಗೆ ಬೇಕಾಗಿರುವುದು ಅಧಿಕಾರ ಮಾತ್ರ ಎಂದರು.