ಮೈಸೂರು: ಸರಳ ದಸರಾ ಉದ್ಘಾಟನೆಗೆ ಡಾ.ಸಿ.ಎನ್.ಮಂಜುನಾಥ್ ಅವರನ್ನು ಸಿಎಂ ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಇನ್ನು ಇವರ ಜೊತೆ 5 ಜನ ಕೊರೊನಾ ವಾರಿಯರ್ಸ್ ಹಾಗೂ ಕೊರೊನಾ ಸಂದರ್ಭದಲ್ಲಿ ಮೃತಪಟ್ಟವರ ಅಂತ್ಯಕ್ರಿಯೆ ನೆರವೇರಿಸುವ ಓರ್ವನನ್ನು ಸನ್ಮಾನಿಸಲಾಗುವುದು ಎಂದು ಸಚಿವರು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಎಕ್ಸ್ಪರ್ಟ್ ಕಮಿಟಿಯ ವರದಿಯ ಪ್ರಕಾರವೇ ದಸರಾ:
ನಿನ್ನೆ ಎಕ್ಸ್ಪರ್ಟ್ ಕಮಿಟಿ ಮೈಸೂರಿಗೆ ಭೇಟಿ ನೀಡಿ ಸರಳ ದಸರಾ ಹೇಗೆ ಮಾಡಬೇಕು ಎಂಬ ಬಗ್ಗೆ ಸರ್ಕಾರಕ್ಕೆ ವರದಿ ಕೊಟ್ಟಿದೆ. ಆ ವರದಿಯ ಪ್ರಕಾರವಾಗಿಯೇ ಸರಳ ದಸರಾ ಮಾಡುತ್ತೇವೆ. ಚಾಮುಂಡಿ ಬೆಟ್ಟದ ಮೇಲೆ ದಸರಾ ಉದ್ಘಾಟನಗೆ 200 ಜನರಿಗೆ ಅವಕಾಶ, ಅರಮನೆ ಮುಂಭಾಗದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 50 ಜನರಿಗೆ ಅವಕಾಶ ಕೊಟ್ಟಿದ್ದಾರೆ.
ಇದರ ಜೊತೆಗೆ ಜಂಬೂ ಸವಾರಿಗೆ 300 ಜನರಿಗೆ ಅವಕಾಶ ನೀಡಬೇಕು ಎಂದಿದ್ದಾರೆ. ಅದರ ಪ್ರಕಾರ ಜಂಬೂಸವಾರಿಯನ್ನು ಲೈವ್ ಮಾಡಬೇಕೆಂಬ ಸೂಚನೆ ನೀಡಿದ್ದು, ಮಾಧ್ಯಮದವರೇ 350 ಜನ ಇದ್ದಾರೆ. ಅವರನ್ನು 50 ಜನಕ್ಕೆ ಲಿಮಿಟ್ ಮಾಡುತ್ತೇವೆ. 100 ಪೋಲಿಸರನ್ನು 50ಕ್ಕೆ, 50 ಮಂದಿ ಜನಪ್ರತಿನಿಧಿಗಳನ್ನು 25ಕ್ಕೆ ಇಳಿಕೆ ಮಾಡುತ್ತೇವೆ. ಅದೇ ರೀತಿ ಪ್ರತಿಯೊಬ್ಬರಿಗೂ ಕೊರೊನಾ ಟೆಸ್ಟ್ ಕಡ್ಡಾಯವಾಗಿದೆ ಎಂದಿದ್ದಾರೆ.
ಸರಳ ದಸರಾ ಹಿನ್ನೆಲೆ 50 ಕಿಲೋಮೀಟರ್ ವ್ಯಾಪ್ತಿಯಲ್ಲಿ ದೀಪಾಲಂಕಾರ ಮಾಡಲು ದಸರಾ ಹೈಪವರ್ ಕಮಿಟಿ ತೀರ್ಮಾನಿಸಿದ್ದು, ಅದರಂತೆ ದೀಪಾಲಂಕಾರ ಮಾಡಲಾಗಿದೆ ಎಂದರು.
ಈ ಬಾರಿ ಕೊರೊನಾ ವಾರಿಯರ್ಸ್ಗಳಾದ ಪೌರ ಕಾರ್ಮಿಕರಾದ ಶ್ರೀಮತಿ ಮರಗಮ್ಮ, ವೈದ್ಯಕೀಯ ಅಧೀಕ್ಷ ಡಾ.ನವೀನ್ ಕುಮಾರ್, ಸ್ಟಾಫ್ನರ್ಸ್ ಶ್ರೀಮತಿ ರುಕ್ಮಿಣಿ, ಆಶಾ ಕಾರ್ಯಕರ್ತೆಯಾದ ಶ್ರೀಮತಿ ನೂರ್ ಜಾನ್, ಪೊಲೀಸ್ ಕಾನ್ಸ್ಟೇಬಲ್ ಶ್ರೀ ಕುಮಾರ್ ಹಾಗೂ ಸಾಮಾಜಿಕ ಕಾರ್ಯಕರ್ತ ಅಯ್ಯೂಬ್ ಅಹಮದ್ ಅವರನ್ನು ದಸರಾ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನಿಸಲಾಗುವುದು ಎಂದಿದ್ದಾರೆ.