ಮೈಸೂರು : ಮಹಾಶಿವರಾತ್ರಿ ಹಬ್ಬದಂದು ಅರಮನೆ ಆವರಣದಲ್ಲಿರುವ ತ್ರಿನಯನೇಶ್ವರ ದೇವಸ್ಥಾನದಲ್ಲಿರುವ ಶಿವನಿಗೆ 11 ಕೆಜಿ ತೂಕದ ಚಿನ್ನದ ಶಿವನ ಮುಖವಾಡದ ಕೊಳಗವನ್ನು ಧಾರಣೆ ಮಾಡಲಾಗುತ್ತದೆ. ಆ ಚಿನ್ನದ ಕೊಳಗವನ್ನು ಜಿಲ್ಲಾ ಖಜಾನೆಯಿಂದ ಇಂದು ದೇವಸ್ಥಾನಕ್ಕೆ ನೀಡಲಾಯಿತು.
ಅಂಬಾವಿಲಾಸ ಅರಮನೆಯ ಆವರಣದಲ್ಲಿರುವ ಶ್ರೀ ತ್ರಿನಯನೇಶ್ವರ ದೇವಸ್ಥಾನದಲ್ಲಿರುವ ಶಿವನಿಗೆ ಮಹಾಶಿವರಾತ್ರಿ ಹಬ್ಬದಂದು ಬೆಳಗಿನ ಜಾವ ವಿಶೇಷ ಅಭಿಷೇಕ ಹಾಗೂ ಪೂಜೆ ಸಲ್ಲಿಸಲಾಗುತ್ತದೆ. ಈ ಸಂದರ್ಭದಲ್ಲಿ ಶಿವನಿಗೆ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ನೀಡಿರುವ 11 ಕೆಜಿ ತೂಕದ ಬಾಲ ಶಿವನ ಕೊಳವನ್ನ ತೊಡಿಸಲಾಗುವುದು. ಆನಂತರ ಶಿವರಾತ್ರಿ ಪೂಜೆಗಳು ನಡೆಯಲಿದೆ ಎಂದು ದೇವಾಲಯದ ಅರ್ಚಕರಾದ ಶ್ರೀ ಹರಿ ವಿವರಿಸಿದ್ದಾರೆ.
ಮಾಘಮಾಸದ ಶಿವರಾತ್ರಿ ಹಬ್ಬದಂದು ನಾಲ್ಕು ಯಾಮದ ವಿಶೇಷ ಪೂಜೆ ಹಾಗೂ ಅಭಿಷೇಕ ನಡೆಸಲಾಗುತ್ತದೆ ಎಂದು ತಿಳಿಸಿದರು. ಮಹಾಶಿವರಾತ್ರಿಯಂದು ವಿಶೇಷವಾಗಿ ನಾಲ್ಕು ಯಾಮದ ಅಭಿಷೇಕವನ್ನು ನಡೆಸಲಾಗುತ್ತದೆ. ಮಧ್ಯಾಹ್ನ 4 ಗಂಟೆಗೆ 108 ಲೀಟರ್ ಹಾಲಿನ ಅಭಿಷೇಕ ಹಾಗೂ ರಾತ್ರಿ ಹತ್ತು ಗಂಟೆಗೆ ಶತ ರುಧ್ರ ಅಭಿಷೇಕ ಹಾಗೂ ಮಧ್ಯರಾತ್ರಿ 3 ಹಾಗೂ 4 ಗಂಟೆಗೆ ಅಭಿಷೇಕ ಪೂಜೆ ಸಲ್ಲಿಸಲಾಗುತ್ತದೆ ಎಂದರು.
ಈ ವಿಶೇಷ ಮಹಾಶಿವರಾತ್ರಿ ಹಬ್ಬದಂದು ಅರಮನೆ ಆವರಣದಲ್ಲಿರುವ ಶ್ರೀ ತ್ರಿನಯನೇಶ್ವರ ದೇವಾಸ್ಥಾನಕ್ಕೆ ಭಕ್ತಾದಿಗಳಿಗೆ ಬೆಳಗ್ಗೆ 6.30 ರಿಂದ ರಾತ್ರಿ 12 ಗಂಟೆಯವರೆಗೆ ದರ್ಶನಕ್ಕೆ ಅವಕಾಶವಿದೆ. ಈ ಸಮಯದಲ್ಲಿ ದೇವರಿಗೆ ಚಿನ್ನದ ಕೊಳಗ ಧರಿಸಿರಲಾಗಿರುತ್ತದೆ. ದರ್ಶನಕ್ಕೆ ಬರುವ ಭಕ್ತರು ಕೋವಿಡ್ ನಿಯಮಗಳನ್ನು ಪಾಲಿಸಿ ಶಿವನ ದರ್ಶನ ಪಡೆದು ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಳ್ಳಬಹುದು ಎಂದು ಅರ್ಚಕರು ತಿಳಿಸಿದ್ದಾರೆ.