ಮೈಸೂರು: ನಗರದ ಹಂಚ್ಯ-ಸಾತಗಳ್ಳಿ ಬಳಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಸಿದ್ಧತೆಗಳು ಪ್ರಾರಂಭವಾಗಿವೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು(ಮೂಡ) 20 ಎಕರೆ ಜಮೀನನ್ನು 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸರ್ಕಾರಕ್ಕೆ ಅಗತ್ಯ ದಾಖಲಾತಿಗಳನ್ನು ನೀಡಿದೆ.
ಮುಂಬರುವ ವಿಧಾನಸಭಾ ಚುನಾವಣೆಗೂ ಮುನ್ನ ಹಂಚ್ಯಾ - ಸಾತಗಳ್ಳಿಯ ಬಿ-ವಲಯದ ಬಳಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣ ಮಾಡಲು ಸಿದ್ಧತಾ ಕಾರ್ಯ ಆರಂಭವಾಗಿದೆ. ನಗರದ ಹೊರವಲಯದ ಬಳಿ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಸೇರಿದ್ದ 84, 85, 104, 105, 106, 102,109 ಸರ್ವೇ ನಂಬರ್ ವ್ಯಾಪ್ತಿಯ 20 ಎಕರೆ 8 ಗುಂಟೆ ಜಾಗದಲ್ಲಿ ಕ್ರೀಡಾಂಗಣದ ನಿರ್ಮಾಣಕ್ಕೆ ಮೂಡ 30 ವರ್ಷಕ್ಕೆ 18 ಕೋಟಿ ರೂಪಾಯಿ ಪಡೆಯಲಿದ್ದು, ಜಾಗ ನೀಡಲು ಒಪ್ಪಿಕೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದಕ್ಕೆ ಸಮ್ಮತಿ ಸೂಚಿಸಿದ್ದು, ಕ್ಯಾಬಿನೆಟ್ನಲ್ಲಿ ಅನುಮತಿ ಸಿಕ್ಕರೆ ಶೀಘ್ರವೇ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ಸಿಗಲಿದೆ.
ಈ ಬಗ್ಗೆ ಮೂಡ ಅಧ್ಯಕ್ಷ ಯಶಸ್ವಿನಿ ಸೋಮಶೇಖರ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿ, 'ಸಾತಗಳ್ಳಿ ಬಿ-ವಲಯದಲ್ಲಿರುವ 20 ಎಕರೆ ಜಾಗವನ್ನು ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ 30 ವರ್ಷ ಗುತ್ತಿಗೆ ನೀಡಲು ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಸಿದ್ಧವಿದೆ. ಇದಕ್ಕಾಗಿ 18 ಕೋಟಿ ರೂಪಾಯಿ ಪಡೆಯಲಿದೆ. ಈ ಬಗ್ಗೆ ನಿನ್ನೆ ಅಧಿಕಾರಿಗಳ ಜೊತೆ ಹೋಗಿ ಸ್ಥಳ ಪರಿಶೀಲನೆ ಮಾಡಿಕೊಂಡು ಬಂದಿದ್ದೇನೆ' ಎಂದು ತಿಳಿಸಿದರು.
ಇದನ್ನೂ ಓದಿ:ಮೈಸೂರು: ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಮುಡಾ ಜೊತೆ ಕೆಎಸ್ಸಿಎ ಚರ್ಚೆ