ಮೈಸೂರು: ಬಿಜೆಪಿಯವರು ನನ್ನನ್ನು ಪಕ್ಷಕ್ಕೆ ಸೇರಿಸಿಕೊಂಡು ಅನ್ಯಾಯ ಮಾಡಿದರು. ನನಗೆ ಬಿಜೆಪಿ ಸಹವಾಸ ಇನ್ನು ಸಾಕು. ನಾನು ಕಾಂಗ್ರೆಸ್ ಸೇರಲು ನಿರ್ಧರಿಸಿದ್ದೇನೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಚಿತ್ರ ನಿರ್ಮಾಪಕ ಸಂದೇಶ್ ನಾಗರಾಜ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರವಾಗಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಜೊತೆ ಮಾತನಾಡುತ್ತೇನೆ. ಬಿಜೆಪಿಯಲ್ಲಿ ನಾನು ಸಕ್ರಿಯನಾಗಿಲ್ಲ. ನನ್ನನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡು ಅನ್ಯಾಯ ಮಾಡಿದರು. ಮೊದಲು ವಿಶ್ವನಾಥ್ಗೆ ಅನ್ಯಾಯ ಮಾಡಿದರು. ಈಗ ನನಗೆ. ಅನ್ಯಾಯ ಮಾಡುವುದರಲ್ಲಿ ಬಿಜೆಪಿಯವರು ನಿಸ್ಸೀಮರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯಡಿಯೂರಪ್ಪ ರಾಜಕೀಯವನ್ನು ಮುಗಿಸಿದರು: ಒಳ್ಳೆತನದಲ್ಲೇ ಬಿಜೆಪಿಯವರು ಯಡಿಯೂರಪ್ಪನವರ ರಾಜಕೀಯವನ್ನು ಮುಗಿಸಿದರು. ಆಗ ಬಿಜೆಪಿಗೆ 40 ಸ್ಥಾನ ನಷ್ಟವಾಯಿತು. ಈಗ ವಿಜಯೇಂದ್ರ ಅವರನ್ನು ಬಲಿ ಕೊಡಲು ವರುಣಾಗೆ ಕರೆತರುತ್ತಿದ್ದಾರೆ. ಬಿಜೆಪಿಯವರು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಯೋಜನೆ ಹಾಕಿದ್ದಾರೆ. ಈ ಬಗ್ಗೆ ವಿಜಯೇಂದ್ರ ಎಚ್ಚೆತ್ತುಕೊಂಡು ಶಿಕಾರಿಪುರದಲ್ಲೆ ಸ್ಪರ್ಧಿಸಲಿ. ಮುಂದಿನ ಚುನಾವಣೆಯ ವೇಳೆಗೆ ಬಿಜೆಪಿಯ ಹತ್ತಕ್ಕೂ ಹೆಚ್ಚು ಶಾಸಕರು ಕಾಂಗ್ರೆಸ್ಗೆ ಸೇರುತ್ತಾರೆ ಎಂದರು.
ಕಳೆದ ಬಾರಿ ಸಂದೇಶ್ ನಾಗರಾಜ್ ಜೆಡಿಎಸ್ನ ಸ್ಥಳೀಯ ಸಂಸ್ಥೆಗಳಲ್ಲಿ ಸ್ಪರ್ಧಿಸಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದರು. ಈ ಬಾರಿ ನಡೆದ ಚುನಾವಣೆಯಲ್ಲಿ ಜೆಡಿಎಸ್ನಿಂದ ಟಿಕೆಟ್ಗೆ ಪ್ರಯತ್ನಿಸಿದ್ದು ಟಿಕೆಟ್ ಸಿಗದೇ ಬಿಜೆಪಿ ಸೇರಿದ್ದರು. ಈಗ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ:ಕಲಬುರಗಿಯಲ್ಲಿ ಎಲೆಕ್ಷನ್‌ಗೂ ಮೊದಲೇ ಪ್ರಾಮಿಸ್ ಪಾಲಿಟಿಕ್ಸ್: ಗೆಳೆಯನ ಪರ ತೆಲ್ಕೂರ ಮತಬೇಟೆ