ಮೈಸೂರು: ಚಾಮರಾಜನಗರದ ಜೆಡಿಎಸ್ ಅಭ್ಯರ್ಥಿಯ ಜೊತೆ, ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಮಾತನಾಡಿರುವ ಫೋನ್ ಸಂಭಾಷಣೆ ವೈರಲ್ ಬಗ್ಗೆ, ಸ್ವತಃ ಸಚಿವ ಸೋಮಣ್ಣ ಅವರೇ ಇಂದು ಪ್ರತಿಕ್ರಿಯೆ ನೀಡಿದ್ದಾರೆ. ವರುಣಾ ಹಾಗೂ ಚಾಮರಾಜನಗರದ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ, ಚಾಮರಾಜನಗರದ ಜೆಡಿಎಸ್ ಅಭ್ಯರ್ಥಿಯ ಜೊತೆ ನಡೆಸಿರುವ ಮೊಬೈಲ್ ಸಂಭಾಷಣೆ ರಾಜ್ಯಾದ್ಯಂತ ವೈರಲ್ ಆಗಿದೆ. ಅದಕ್ಕೆ ಸೋಮಣ್ಣ ಸ್ಪಷ್ಟೀಕರಣ ನೀಡಿದ್ದಾರೆ.
ಈ ಬಗ್ಗೆ ವರುಣಾ ಕ್ಷೇತ್ರದ ಚಿನ್ನಂಬಳ್ಳಿ ಗ್ರಾಮದಲ್ಲಿ ಸೋಮಣ್ಣ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ವೈರಲ್ ಆಗಿರುವ ಆಡಿಯೋಗೂ ನನಗೂ ಯಾವುದೇ ಸಂಬಂಧ ಇಲ್ಲ. ನನ್ನ ಬಗ್ಗೆ ಯಾವ ವಿಚಾರವೂ ಸಿಗುತ್ತಿಲ್ಲ. ಅದಿಕ್ಕೆ ಹೀಗೆ ಮಾಡುತ್ತಿದ್ದಾರೆ. ನಾನು ಯಾವುದೋ ನಾಯಿ ನರಿಗಳ ಮಾತಿಗೆ ಮಾತನಾಡುವ ಪರಿಸ್ಥಿತಿ ಇಲ್ಲ. ನಾನು ದಡ್ಡ ಅಲ್ಲ, 45 ವರ್ಷಗಳ ಕಾಲ ರಾಜಕಾರಣ ಮಾಡಿದ್ದೇನೆ. ಚುನಾವಣಾ ಮುಗಿದ ಮೇಲೆ ಈ ಬಗ್ಗೆ ಮಾತನಾಡುತ್ತೇನೆ.