ಮೈಸೂರು: ರಾಮನಗರ ಜಿಲ್ಲೆಯನ್ನು ಬೆಂಗಳೂರಿಗೆ ಸೇರಿಸುವ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಜೊತೆ ಡಿಕೆಶಿ ಅವರು ಚರ್ಚೆ ಮಾಡಿಲ್ಲ. ಅವರ ಮೈಂಡ್ನಲ್ಲಿ ಏನಿದೆ ಎಂಬುದು ಗೊತ್ತಿಲ್ಲ ಎಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಇಂದು ತಮ್ಮ ಟಿ ಕೆ ಲೇಔಟ್ ನ ಮನೆಯ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾಡಹಬ್ಬ ದಸರಾ ಮಹೋತ್ಸವ ಯಶಸ್ವಿಯಾಗಿ ನಡೆದಿದೆ. ಎಲ್ಲ ಪಕ್ಷದ ಶಾಸಕರು, ಜನಪ್ರತಿನಿಧಿಗಳು ಬೆಂಬಲ ನೀಡಿದ್ದಾರೆ. ಎಲ್ಲ ಕಾರ್ಯಗಳು ಚೆನ್ನಾಗಿ ನಡೆದಿವೆ ಎಂದರು.
ಉಸ್ತುವಾರಿ ಸಚಿವ ಮಹಾದೇವಪ್ಪ ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂದ ಸಿದ್ದರಾಮಯ್ಯ, ನಾಡಹಬ್ಬ ದಸರಾ ಆಚರಣೆಯ ಸ್ವರೂಪ ಬದಲಾವಣೆ ಬಗ್ಗೆ ಕೇಳಿದ ಪ್ರಶ್ನೆಗೆ, ಇದನ್ನು ಮೈಸೂರು ಜನತೆಗೆ ಕೇಳೋಣ, ನಾಡಹಬ್ಬ ದಸರಾವನ್ನ ಯಾವ ರೀತಿ ಆಚರಣೆ ಬದಲಾವಣೆ ಮಾಡಬೇಕು ಎಂದು ಕೇಳೋಣ, ಆ ರೀತಿ ಆಚರಣೆ ಮಾಡೋಣ ಎಂದು ಹೇಳಿದರೆ, ಆ ರೀತಿ ಬದಲಾವಣೆ ಮಾಡೋಣ ಎಂದು ಮುಖ್ಯಮಂತ್ರಿಗಳು ಹೇಳಿಕೆ ನೀಡಿದರು.
ಬಳಿಕ ರಾಮನಗರ ಜಿಲ್ಲೆಯ ಕನಕಪುರವನ್ನ ಬೆಂಗಳೂರಿಗೆ ಸೇರಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿ ಈ ಬಗ್ಗೆ ನನ್ನ ಜೊತೆ ಡಿ ಕೆ. ಶಿವಕುಮಾರ್ ಚರ್ಚೆ ಮಾಡಿಲ್ಲ. ನನಗೆ ಅವರ ಮೈಂಡ್ನಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ರಾಮನಗರದ ವಿಚಾರದಲ್ಲಿ ಅವರನ್ನೇ ಕೇಳಿ. ಗೊತ್ತಿಲ್ಲದ ವಿಚಾರಗಳ ಬಗ್ಗೆ ಹೆಚ್ಚಾಗಿ ಮಾತನಾಡಬಾರದು ಎಂದು ಮುಖ್ಯಮಂತ್ರಿಗಳು ಇದೇ ವೇಳೆ ಹೇಳಿದರು.
ಬಿಜೆಪಿ ಟ್ವೀಟ್ಗೆ ಸಿಎಂ ತಿರುಗೇಟು:ಕರ್ನಾಟಕದ ಕಾಂಗ್ರೆಸ್ ಸರ್ಕಾರ ಎಟಿಎಂ ಸರ್ಕಾರ ಎಂಬ ಬಿಜೆಪಿ ಟ್ವೀಟ್ಗೆ ತಿರುಗೇಟು ನೀಡಿದ ಸಿಎಂ, ಕೋಟ್ಯಂತರ ರೂಪಾಯಿ ಹಣದಲ್ಲಿ ಆಪರೇಷನ್ ಕಮಲ ಮಾಡಿದವರು ನಮ್ಮ ಬಗ್ಗೆ ಮಾತನಾಡುತ್ತಾರೆ. ರಾಜ್ಯ ಆರ್ಥಿಕವಾಗಿ ದಿವಾಳಿಯಾಗಲು ಬಿಜೆಪಿ ಕಾರಣ. ವಿದ್ಯುತ್ ತೊಂದರೆ ಆಗಿದ್ದರೆ ಅದಕ್ಕೆ ಬಿಜೆಪಿ ಕಾರಣ. ಬಿಜೆಪಿ ಆಡಳಿತಾವಧಿಯಲ್ಲಿ ಒಂದೆ ಒಂದು ಮೆಗಾವ್ಯಾಟ್ ಯುನಿಟ್ ವಿದ್ಯುತ್ ಉತ್ಪಾದನೆ ಆಗಿಲ್ಲ ಎಂದರು.