ಮೈಸೂರು: ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ ಜನ್ಮ ಭೂಮಿ, ರಾಜಕೀಯ ಜಿದ್ದಾಜಿದ್ದಿಗೆ ಹೆಸರಾದ ಹುಣಸೂರು ವಿಧಾನಸಭಾ ಮತ ಕ್ಷೇತ್ರದಲ್ಲಿ ಚುನಾವಣಾ ಲೆಕ್ಕಾಚಾರ ಜೋರಾಗಿದೆ. ಈ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದ್ದು, ಈ ಬಾರಿ ಜೆಡಿಎಸ್‌ನಿಂದ ಶಾಸಕ ಜಿ.ಟಿ. ದೇವೇಗೌಡ ಪುತ್ರ ಹರೀಶ್ ಗೌಡ ಹಾಗೂ ಕಾಂಗ್ರೆಸ್‌ನ ಮಂಜುನಾಥ್ ನಡುವೆ ನೇರ ಪೈಪೋಟಿ ಇದೆ. ಕ್ಷೇತ್ರದಲ್ಲಿ ಪರೋಕ್ಷವಾಗಿ ಜಿ.ಟಿ. ದೇವೇಗೌಡ ಹಾಗೂ ಸಿದ್ದರಾಮಯ್ಯನವರ ವರ್ಚಸ್ಸಿನ ಮೇಲೆ ಚುನಾವಣೆ ನಡೆಯಲಿದ್ದು, ಯಾರು ಮೇಲುಗೈ ಸಾಧಿಸಲಿದ್ದಾರೆ ಅನ್ನೋದು ಕುತೂಹಲ ಮೂಡಿಸಿದೆ.
ಜಿಟಿಡಿ ಪುತ್ರ ಹರೀಶ್‌ಗೌಡ ಸ್ಪರ್ಧೆಯಿಂದ, ದೇವರಾಜ ಅರಸು ಅವರ ಕರ್ಮಭೂಮಿಯೂ ಆಗಿದ್ದರಿಂದ ಈ ಕ್ಷೇತ್ರ ಸದ್ಯ ರಾಜ್ಯ ರಾಜಕೀಯದಲ್ಲೂ ಸದ್ದು ಮಾಡುತ್ತಿದೆ. ಅವರಿಗೆ ಪೈಪೋಟಿ ನೀಡಲು ಹಾಲಿ ಶಾಸಕ ಮಂಜುನಾಥ್ ಕೂಡ ಭಾರೀ ಸಿದ್ಧತೆ ಮಾಡಿಕೊಂಡಿದ್ದು ಈ ಬಾರಿ ಇಲ್ಲಿ ಯಾರೆ ಗೆದ್ದರೂ ಐತಿಹಾಸಿಕ ದಾಖಲೆ ಬರೆಯುವುದು ನಿಶ್ಚಿತ ಅನ್ನೋದು ರಾಜಕೀಯ ವಿಶ್ಲೇಷಕರ ಅನಿಸಿಕೆ.
70 ದಶಕದಲ್ಲಿ 2 ಬಾರಿ ಅಧಿಕಾರದ ಚುಕ್ಕಾಣಿ ಹಿಡಿದು, ಪರಿವರ್ತನೆಯ ಹರಿಕಾರ ಎನಿಸಿಕೊ೦ಡಿದ್ದ ಡಿ.ದೇವರಾಜ ಅರಸು ಅವರನ್ನು ಮುಖ್ಯಮಂತ್ರಿ ಗದ್ದುಗೆಗೆ ಕಳುಹಿಸಿದ ರಾಜಕೀಯ ಪುಣ್ಯಭೂಮಿ ಕ್ಷೇತ್ರ ಎನ್ನಲಾಗುತ್ತಿದೆ. ಚುನಾವಣೆಯಿಂದಲೂ ಅಸ್ತಿತ್ವದಲ್ಲಿರುವ ಈ ಕ್ಷೇತ್ರದಲ್ಲಿ ಈವರೆಗೆ ಮೂರು ಉಪಚುನಾವಣೆ ಸೇರಿದಂತೆ ಒಟ್ಟು 19 ಚುನಾವಣೆ ನಡೆದಿವೆ. ಲಕ್ಷಣತೀರ್ಥ ಆಸುಪಾಸಿನಲ್ಲಿ ನದಿಯ ಹರಡಿಕೊಂಡಿರುವ ಈ ಕ್ಷೇತ್ರ ರಾಜ್ಯಕ್ಕೆ ಮುಖ್ಯಮಂತ್ರಿ ನೀಡಿದರೂ ಪಟ್ಟಣದ ನಡುವೆ ಸಮಸ್ಯೆಗಳಿಂದ ಮುಕ್ತವಾಗಿಲ್ಲ. ಲಕ್ಷ್ಮಣತೀರ್ಥ ನದಿ ವಿಪರೀತ ಕಲ್ಮಶವಾಗಿದೆ. ಆದಿವಾಸಿಗಳ ಕೆಲ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ. ಬಿಜೆಪಿ ಅಭ್ಯರ್ಥಿಯಾಗಿರುವ ವಿಶ್ವನಾಥ್ ಪ್ರತ್ಯೇಕ ಜಿಲ್ಲೆಯ ಕೂಗು ಎತ್ತಿರುವರಾದರೂ ಅದು ಈಡೇರಿಲ್ಲದಿರುವುದು ಕ್ಷೇತ್ರದ ವೈಶಿಷ್ಟ್ಯ.
19 ಬಾರಿ ನಡೆದಿ ಚುನಾವಣೆಯಲ್ಲಿ 12 ಬಾರಿ ಕಾಂಗ್ರೆಸ್, 5 ಬಾರಿ ಜೆಡಿಎಸ್, 2 ಬಾರಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿದೆ. ಆದರೆ, ಅರಸು ನಂತರ ಕಾಂಗ್ರೆಸ್ ಪಕ್ಷದಲ್ಲಿ ಕಾಲೆಳೆಯುವ ಸ್ಥಿತಿ ನಿರ್ಮಾಣವಾಗಿದ್ದು ಮರೆಯುಂತಿಲ್ಲ. ಶತಾಯಗತಾಯ 11 ವರ್ಷಗಳ ನಂತರ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಅವಕಾಶ ಸಿಕ್ಕಿತ್ತು. ಮಧ್ಯದಲ್ಲಿ ಅಂತರ ಕಾದು ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಗೆಲವು ಕಂಡಿದೆ. ಸದ್ಯ 2023ರ ಚುನಾವಣೆಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿ ನಡುವೆ ಜಿದ್ದಾ ಜಿದ್ದಿ ನಡೆಯುತ್ತಿದೆ. ಇದರೊಟ್ಟಿಗೆ ಬಿಜೆಪಿಯಿಂದ ಜಿಪಂ ಮಾಜಿ ಸದಸ್ಯ ಜಿ.ಎಸ್.ರಮೇಶ್‌ಕುಮಾರ್, ಬಿ.ಎಸ್.ಯೋಗನಂದಕುಮಾರ್, ನಾಗಣ್ಣಗೌಡ, ಹೆಚ್.ಎನ್.ಮಂಜುನಾಥ್, ಚಂದ್ರಶೇಖರ್, ಮಹದೇವ ಹೆಗ್ಗಡೆ ಸಹ ಬಿಜೆಪಿಯ ಟಿಕೆಟ್ ಆಕಾಂಕ್ಷಿತರ ಸಾಲಿನಲ್ಲಿದ್ದಾರೆ. ಘಟಾನುಘಟಿಗಳು ಪ್ರತಿನಿಧಿಸಿದ ಈ ಕ್ಷೇತ್ರದಲ್ಲಿ ಶಾಸಕ ಸ್ಥಾನಕ್ಕೆ ಮತದಾರರು ಯಾರನ್ನು ಆಯ್ಕೆ ಮಾಡುತ್ತಾರೆ ಕಾದು ನೋಡಬೇಕಿದೆ.
ಸಿದ್ದು-ಜಿಟಿಡಿ ನಡುವೆ ಕದನ:ವಾಸ್ತವದಲ್ಲಿ ಕಾಂಗ್ರೆಸ್‌ನ ಹಾಲಿ ಶಾಸಕ ಹೆಚ್.ಪಿ.ಮಂಜುನಾಥ್ ಅಭ್ಯರ್ಥಿಯಾದರೂ ನೇರವಾಗಿ ಸಿದ್ಧರಾಮಯ್ಯ ಕಣಕ್ಕಿಳಿಯುವುದು ನಿಶ್ಚಿತ. ಇದುವರೆವಿಗೂ ಒಕ್ಕಲಿಗರ ಪ್ರಾಬಲ್ಯದ ನಡುವೆಯೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದರು. ಆದರೆ, ಈ ಬಾರಿ ಮೂಲತಃ ಒಕ್ಕಲಿಗ ಪ್ರಬಲ ನಾಯಕರಾದ ಜಿ.ಡಿ.ಹರೀಶ್‌ಗೌಡ ವಿರುದ್ಧ ಚುನಾವಣೆ ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ತಮ್ಮ ಸೋಲನ್ನು ಜಿಟಿ ದೇವೇಗೌಡರಿಗೆ ತೋರಿಸಲು ಒಳಗೊಳಗೆ ಪಣ ತೊಟ್ಟಿರುವ ಸಿದ್ದರಾಮಯ್ಯ ಈ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ಪರಿಗಣಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಹೀಗಾಗಿ ಈ ಬಾರಿ ಇಬ್ಬರಲ್ಲಿ ಯಾರೇ ಗೆದ್ದರೂ ಅದು ಇತಿಹಾಸದಲ್ಲಿ ದಾಖಲೆಯಾಗಲಿದೆ.