ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಹೇಳಿಕೆ ಮೈಸೂರು:ಬೆಂಗಳೂರಿನ ಐಟಿ ರೇಡ್ನಲ್ಲಿ ಸಿಕ್ಕ ಹಣ ಎಸ್ಎಸ್ಟಿ (ಡಿ ಕೆ.ಶಿವಕುಮಾರ್, ಸುರೇಶ್ ಟ್ಯಾಕ್ಸ್) ಟ್ಯಾಕ್ಸ್ಗೆ ಸೇರಿದ್ದಾಗಿದೆ. ಈ ಮೂಲಕ ರಾಜ್ಯದಲ್ಲಿ ಹೊಸ ಕಲೆಕ್ಷನ್ ಆರಂಭವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಇಂದು ಕುಟುಂಬ ಸಮೇತ ಮೈಸೂರಿನ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು. 'ರಾಜ್ಯದಲ್ಲಿ ಕೃಷಿ ವಲಯ ಸೇರಿದಂತೆ ಜನರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ಸರ್ಕಾರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನಾಡಿನ ಜನತೆಗೆ ತಾಯಿಯ ಆಶಿರ್ವಾದ ಸಿಗಲಿ ಎಂಬುದು ನನ್ನ ಪ್ರಾರ್ಥನೆ' ಎಂದರು.
"ರಾಜ್ಯದಲ್ಲಿ ಈಗ ಎಸ್ಎಸ್ಟಿ ಟ್ಯಾಕ್ಸ್ ಆರಂಭವಾಗಿದೆ": 'ರಾಜ್ಯದಲ್ಲಿ ಈ ಹಿಂದೆ ವೈಎಸ್ಟಿ ಟ್ಯಾಕ್ಸ್ ಆರಂಭವಾಗಿತ್ತು, ಇದೀಗ ಅದಾದ ನಂತರ ಎಸ್ಎಸ್ಟಿ ಟ್ಯಾಕ್ಸ್ ಎಂಬ ಹೊಸ ಕಲೆಕ್ಷನ್ ಆರಂಭವಾಗಿದೆ. ಬೆಂಗಳೂರಿನ ಅಂಬಿಕಾಪತಿ ಮನೆಯ ಐಟಿ ರೇಡ್ನಲ್ಲಿ ಸಿಕ್ಕ ಹಣ ಎಸ್ಎಸ್ಟಿ ಟ್ಯಾಕ್ಸ್ಗೆ ಸೇರಿದ್ದಾಗಿದ್ದು, ಸಂತೋಷ್ ಮನೆಯಲ್ಲಿ ಸಿಕ್ಕಿದ್ದು ವೈಎಸ್ಟಿ ಟ್ಯಾಕ್ಸ್ ಹಣ ಆಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಪ್ರಾಮಾಣಿಕತೆ ತೋರಬೇಕು. ಭ್ರಷ್ಟಾಚಾರ ಮಾಡಿ ದೇವರ ಮುಂದೆ ಕೈ ಮುಗಿದರೆ ದೇವಿ ಕ್ಷಮಿಸೋದಿಲ್ಲ. ಲೂಟಿ ಮಾಡುವವರು ತಿಹಾರ್ ಜೈಲಿಗೆ ಹೋಗುವುದು ತಪ್ಪುವುದಿಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಭ್ರಷ್ಟಾಚಾರ ಮಾಡಲು ಇಲಾಖೆಗಳು ಪೈಪೋಟಿಗೆ ಬಿದ್ದಿವೆ. ಭ್ರಷ್ಟಾಚಾರ ನಡೆಯುತ್ತಿದೆ ಎಂಬುದಕ್ಕೆ ಈಗ ಹಣ ಪತ್ತೆಯಾಗಿರುವುದಕ್ಕಿಂತ ಸಾಕ್ಷಿ ಬೇಕೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದರು.
ರಾಜ್ಯದಲ್ಲಿ ಬರ ಪರಿಸ್ಥಿತಿ ಹೆಚ್ಚಾಗಿದ್ದು, ಈ ನಡುವೆ ರೈತರಿಗೆ ವಿದ್ಯುತ್ ಅಭಾವ ಕೂಡ ಎದುರಾಗಿದೆ. ಬರಗಾಲದ ಬಗ್ಗೆ ಕೃಷಿ ಸಚಿವರ ಹೇಳಿಕೆಯನ್ನು ಗಮನಿಸಿದ್ದೇನೆ. ವಿದ್ಯುತ್ ಸಮಸ್ಯೆ ಬಗ್ಗೆ ಈಗಾಗಲೇ ನಾನು ಹೇಳಿದ್ದೆ. ಮುಂದಿನ ಎರಡು ತಿಂಗಳು ಇನ್ನೂ ದುಸ್ತರ ಪರಿಸ್ಥಿತಿ ಬರಲಿದೆ. ರೈತರ ಬಗ್ಗೆ ಸರ್ಕಾರಕ್ಕೆ ಚಿಂತೆ ಇಲ್ಲ. ಇವರು ಬರೀ ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್ ಶಾಸಕರು ತಮ್ಮ ಕ್ಷೇತ್ರಗಳಿಗೆ ಹೋಗಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳುತ್ತಾರೆ. ಇವರು ಮಾತ್ರ ಬೆನ್ನು ತಟ್ಟಿಕೊಂಡು ಓಡಾಡುತ್ತಾರೆ, ಮುಂದೆ ಜನರೇ ತಿರುಗಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೃಷಿ ಸಚಿವರ ಹೇಳಿಕೆಗೆ ತಿರುಗೇಟು ನೀಡಿದರು.
ದಸರಾ ಕಾರ್ಯಕ್ರಮಕ್ಕೆ 3 ಲಕ್ಷ ಕಮಿಷನ್ ಪ್ರಕರಣ:ದಸರಾ ವಿಚಾರದಲ್ಲಿಕೇಳಿ ಬಂದಿರುವ ಕಮಿಷನ್ ಬೇಡಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಈ ಪ್ರಕರಣದಲ್ಲಿ ಅಧಿಕಾರಿ ಲಂಚ ಕೇಳಲು ಕಾರಣ ಯಾರು?. ಆ ಅಧಿಕಾರಿ ಲಂಚ ಕೊಟ್ಟು ಇಲ್ಲಿಗೆ ಬಂದಿದ್ದಾನೆ, ಅದಕ್ಕೆ ಲಂಚ ಕೇಳಿದ್ದಾನೆ. ಸರ್ಕಾರದಲ್ಲಿ ಭ್ರಷ್ಟಾಚಾರ ಯಾವ ಹಂತಕ್ಕೆ ತಲುಪಿದೆ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ ಎಂದು ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಯಾವ ಪಕ್ಷದ ಜೊತೆ ಮೈತ್ರಿ ಆದರೆ ಅವರಿಗೇನು - ಎಚ್.ಡಿ.ರೇವಣ್ಣ:ಕುಮಾರಸ್ವಾಮಿ ಅವರು ದೇವಸ್ಥಾನದಿಂದ ಹೊರ ಬರುತ್ತಿದ್ದಂತೆ, ಮಾಜಿ ಸಚಿವರಾದ ಎಚ್.ಡಿ.ರೇವಣ್ಣ ಸಹ ಚಾಮುಂಡಿ ಬೆಟ್ಟಕ್ಕೆ ಬಂದು ತಾಯಿಯ ದರ್ಶನ ಪಡೆದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಇದ್ದಾರೆ, ಕುಮಾರಸ್ವಾಮಿ ಅವರೂ ಕೂಡಾ ಇದ್ದಾರೆ. ಮೈತ್ರಿ ವಿಚಾರದ ಬಗ್ಗೆ ಅವರು ತೀರ್ಮಾನ ಮಾಡುತ್ತಾರೆ. ರಾಜ್ಯಾಧ್ಯಕ್ಷರನ್ನು ಕರೆದಿದ್ದಾರೆ ಎಂದರೆ ಇದರ ಬಗ್ಗೆ ತಿಳಿದುಕೊಳ್ಳಲು ಕರೆದಿರುತ್ತಾರೆ. ನಮ್ಮ ಇನ್ವಾಲ್ಮೆಂಟ್ ಬಗ್ಗೆ ಏನು ತಲೆ ಕೆಡಿಸಿಕೊಳ್ಳಬೇಡಿ. ರಾಷ್ಟ್ರೀಯ ಪಕ್ಷಗಳ ಜೊತೆ ಮೈತ್ರಿ ಆದರೆ ಅವರಿಗೇನು ತೊಂದರೆ?. ಅದು ನಮಗೆ ಬಿಟ್ಟಿದ್ದು.
ದೇವೇಗೌಡರು, ಕುಮಾರಸ್ವಾಮಿ ಈ ಬಗ್ಗೆ ಕುಳಿತು ತೀರ್ಮಾನ ಮಾಡುತ್ತಾರೆ. ಇದು ಅವರಿಗೆ ಬಿಟ್ಟ ವಿಷಯ. ರಾಜ್ಯದ ಜನತೆಗೆ ತಾಯಿ ಒಳ್ಳೆಯದು ಮಾಡಲಿ. ಮಳೆ ಬೆಳೆ ಚೆನ್ನಾಗಿ ಆಗಲಿ ಎಂದು ತಾಯಿಯಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿ ಮುನ್ನಡೆದರು.
ಇದನ್ನೂ ಓದಿ:ಎಲ್ಲವನ್ನೂ ಬಿಚ್ಚಿಡುತ್ತೇನೆ, ಸ್ವಲ್ಪ ಕಾಯಿರಿ: ಬಿಜೆಪಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಎಚ್ಚರಿಕೆ