ಕರ್ನಾಟಕ

karnataka

ETV Bharat / state

ಜೆಡಿಎಸ್ ಕುಟುಂಬದ ಎಟಿಎಂ ಅಲ್ಲ, ರೈತರ ಎಟಿಎಂ: ಹೆಚ್ ಡಿ ಕುಮಾರಸ್ವಾಮಿ

ದೇವೇಗೌಡರಿಗೆ ಭ್ರಷ್ಟಾಚಾರದ ಆರೋಪ ಮಾಡಿದ ಬಿಜೆಪಿಯ ಪತನ ಕರ್ನಾಟಕದಿಂದಲೇ ಆರಂಭ - ಜೆಡಿಎಸ್ ಕುಟುಂಬದ ಎಟಿಎಂ ಅಲ್ಲ, ರೈತರ ಎಟಿಎಂ ಎಂದು ಶಾ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ - ಈ ಬಾರಿ 135 ಕ್ಷೇತ್ರದಲ್ಲಿ ಗೆದ್ದು ಸ್ವತಂತ್ರ ಸರ್ಕಾರ ಸ್ಥಾಪಿಸುವ ಪಣ.

H D Kumaraswamy
ಹೆಚ್ ಡಿ ಕುಮಾರಸ್ವಾಮಿ

By

Published : Jan 2, 2023, 5:23 PM IST

ಜೆಡಿಎಸ್ ಕುಟುಂಬದ ಎಟಿಎಂ ಅಲ್ಲ, ರೈತರ ಎಟಿಎಂ ಎಂದು ಅಮಿತ್​ ಶಾಗೆ ತಿರುಗೇಟು ನೀಡಿದ ಹೆಚ್ ಡಿ ಕುಮಾರಸ್ವಾಮಿ

ಮೈಸೂರು: ಜೆಡಿಎಸ್ 6.50 ಕೋಟಿ ಜನರ ಹಾಗೂ ರೈತರ ಎಟಿಎಂ, ಇದು ಕುಟುಂಬದ ಎಟಿಎಂ ಅಲ್ಲ ಎಂದು ಅಮಿತ್ ಶಾ ಹೇಳಿಕೆಗೆ ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ. ಕುಮಾರಸ್ವಾಮಿ ತಿರುಗೇಟು ನೀಡಿದರು. ಇಂದು ಮೈಸೂರಿನ ಕೆ ಆರ್ ಕ್ಷೇತ್ರದಲ್ಲಿ ಶರಣರೊಂದಿಗೆ ಕುಮಾರಣ್ಣ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್ ಡಿ. ಕುಮಾರಸ್ವಾಮಿ, ಕೇಂದ್ರದ ಗೃಹ ಸಚಿವರು ಕರ್ನಾಟಕಕ್ಕೆ ಭೇಟಿ ನೀಡಿದಾಗ 'ಜೆಡಿಎಸ್ ಪಕ್ಷಕ್ಕೆ ಮತ ನೀಡಿದರೆ ಕುಟುಂಬದ ಎಟಿಎಂಗೆ ಮತ ನೀಡಿದಂತೆ' ಎಂಬ ಹೇಳಿಕೆ ತಿರುಗೇಟು ನೀಡಿದ್ದಾರೆ.

ಅಮಿತ್ ಶಾ ಅವರು ದೇವೇಗೌಡರ ಸಣ್ಣ ಉಗುರಿಗೂ ಸಮ ಇಲ್ಲ, ದೇವೇಗೌಡರ ಕೊಡುಗೆ ಏನು ಎಂಬುದು ಈ ನಾಡಿಗೆ ಗೊತ್ತು. ಜೆಡಿಎಸ್ ಪಕ್ಷ ಕುಟುಂಬದ ಎಟಿಎಂ ಅಲ್ಲ, ಈ ನಾಡಿನ ಆರೂವರೆ ಕೋಟಿ ಜನರ ಹಾಗೂ ರೈತರ ಎಟಿಎಂ ಆಗಿದೆ ಎಂದು ಹೇಳಿದರು.

ಶಾಗೆ ಬಹಿರಂಗ ಸವಾಲು:ನಾವು ಯಾವತ್ತೂ ಮೈತ್ರಿ ಮಾಡಿಕೊಳ್ಳಿ ಎಂದು ಅಮಿತ್ ಶಾ ಮನೆಗೆ ಹೋಗಿರಲಿಲ್ಲ. ನಾವು ನಮ್ಮ ಪಾಡಿಗೆ ಪಂಚರತ್ನ ಯಾತ್ರೆ ಮಾಡಿಕೊಂಡು ಪಕ್ಷವನ್ನು ಕಟ್ಟುತ್ತಿದ್ದೇವೆ ಎಂದ ಎಚ್​ಡಿಕೆ, ನಾವು ಮಂಡ್ಯಕ್ಕೆ ಏನು ಕೊಟ್ಟಿದ್ದೇವೆ ಎಂಬುದರ ಬಗ್ಗೆ ಚರ್ಚೆಗೆ ಬನ್ನಿ ಎಂದು ಅಮಿತ್ ಶಾಗೆ ಬಹಿರಂಗ ಸವಾಲು ಹಾಕಿದ್ದಾರೆ.

ಮುಖ್ಯಮಂತ್ರಿ ಮಾಡುತ್ತೇನೆಂದು ಪ್ರಧಾನಿಯವರೇ ಕರೆದಿದ್ದರು:ನಾನು ಮುಖ್ಯಮಂತ್ರಿ ಆಗಿದ್ದಾಗ ಅಭಿವೃದ್ಧಿ ವಿಚಾರದ ಬಗ್ಗೆ ಚರ್ಚೆ ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದೆ, ಆಗ ಪಿಎಂ, ನೀವು ರಾಜೀನಾಮೆ ಕೊಟ್ಟು ಬನ್ನಿ ನಾಳೆ ನಮ್ಮ ಪಕ್ಷದಿಂದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ತೆಗೆದುಕೊಳ್ಳಿ ಎಂದು ಪ್ರಧಾನಿಯವರೇ ನನಗೆ ಆಫರ್ ಕೊಟ್ಟಿದ್ದರು.

ನಾವು ಯಾವತ್ತೂ ಯಾರ ಮನೆ ಮುಂದೆ ಮೈತ್ರಿಗೆ ಹೋಗಿಲ್ಲ, ತಂದೆ ದೇವೇಗೌಡರು ಪ್ರಧಾನಿ ಆಗಿದ್ದಾಗ ಹಾಗೂ ನಾನು ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ನಾನು ಒಂದೇ ಒಂದು ಸರ್ಕಾರದ ಖಜಾನೆಯನ್ನು ಲೂಟಿ ಮಾಡಿದ ಪ್ರಕರಣ ತೋರಿಸಿ. ಆದರೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಲೂಟಿ ಮಾಡುತ್ತಿರುವುದು ಎಲ್ಲರಿಗೂ ಗೊತ್ತು. ಈಗ ಮುಂದಿನ ಚುನಾವಣೆಗೆ ಸಾಮರ್ಥ್ಯ ಇಲ್ಲದ ಕಡೆ ಈಗಾಗಲೇ ನಾಯಕರನ್ನು ಖರೀದಿ ಮಾಡಲು ಬಿಜೆಪಿ ಪಕ್ಷ ಹುನ್ನಾರ ನಡೆಸಿದೆ. ಜೆಡಿಎಸ್ ಪಕ್ಷವನ್ನು ಕೆಣಕಿದ್ದಿರಿ, ನಿಮ್ಮನ್ನ ಸೋಲಿಸುವ ಪಣ ತೊಟ್ಟಿದ್ದೇನೆ ಎಂದರು.

ಈ ಬಾರಿ ಸಮ್ಮಿಶ್ರ ಸರಕಾರ ಬರುವುದಿಲ್ಲ:ನಾನು ಪಂಚರತ್ನ ಯಾತ್ರೆಗೆ ಹೋದಾಗ ಜನರ ಮನಸ್ಥಿತಿ ನೋಡಿದ್ದೇನೆ. ಈ ಬಾರಿ ಜೆಡಿಎಸ್ 35 ಸ್ಥಾನ ಅಲ್ಲ 135 ಸ್ಥಾನ ಗೆಲ್ಲುವ ಪಣ ತೊಟ್ಟಿದ್ದೇನೆ. ಈ ಬಾರಿ ಸಮ್ಮಿಶ್ರ ಸರಕಾರ ಯಾವುದೇ ಕಾರಣಕ್ಕೂ ಬರುವುದಿಲ್ಲ. ಕನ್ನಡಿಗರ, ರೈತರ ಮಕ್ಕಳ ಸರ್ಕಾರ ಕರ್ನಾಟಕದಲ್ಲಿ ಖಂಡಿತ ಅಧಿಕಾರಕ್ಕೆ ಬರುತ್ತದೆ. ಮಂಡ್ಯ ಸಭೆಯಲ್ಲಿ ಜನರಿಗೆ ನೀಡಬೇಕಾದ ಅನ್ನವನ್ನು ಮಣ್ಣಿನಲ್ಲಿ ಹೂತು ಹಾಕಿದರು ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಭ್ರಷ್ಟರು ಎಂದು ಬಿಜೆಪಿಯನ್ನು ಕೆಣಕ್ಕಿದ್ದಾರೆ. ಬಿಜೆಪಿಯ ಪತನ ಕರ್ನಾಟಕದಿಂದಲೇ ಆರಂಭವಾಗುತ್ತದೆ ಎಂದರು.

ದೇವಾಲಯದಲ್ಲಿ ಮಗುವಿಗೆ ನಾಮಕರಣ:ವೈಕುಂಠ ಏಕಾದಶಿ ನಿಮಿತ್ತ ಮೈಸೂರು ನಗರದ ಒಂಟಿ ಕೊಪ್ಪಲಿನಲ್ಲಿರುವ ಲಕ್ಷ್ಮಿ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಅಲ್ಲಿದ್ದ ಸಾದನಹಳ್ಳಿಯ ಜೀವನ್ ಕುಮಾರ್ ಹಾಗೂ ಅನುಷಾ ದಂಪತಿಗಳ ಎರಡು ತಿಂಗಳ ಗಂಡು ಮಗುವಿಗೆ ಶುಭಂ ಗೌಡ ಎಂದು ನಾಮಕರಣ ಮಾಡಿದರು. ನಾಡಿನ ಜನತೆಗೆ ವೈಕುಂಠ ಏಕಾದಶಿ ಶುಭಾಶಯ ತಿಳಿಸಿ ಹಾಗೂ ವಿಜಯಪುರದ ಸಿದ್ದೇಶ್ವರ ಸ್ವಾಮೀಜಿಗಳು ಆದಷ್ಟು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.

ಇದನ್ನೂ ಓದಿ:ಮೈಸೂರು : ಮಗುವಿಗೆ ಶುಭಂ ಗೌಡ ಎಂದು ನಾಮಕರಣ ಮಾಡಿದ ಹೆಚ್ ​ಡಿ ಕುಮಾರಸ್ವಾಮಿ

ABOUT THE AUTHOR

...view details