ಮೈಸೂರು: ಜನರ ಸಮಸ್ಯೆಯನ್ನು ಬಗೆಹರಿಸುವುದಕ್ಕಿಂತ, ರಾಜ್ಯದ ಜನರ ತೆರಿಗೆ ಹಣವನ್ನು ಯಾವ ರೀತಿ ದುರ್ಬಳಕೆ ಮಾಡಬೇಕು ಎಂಬ ಅಜೆಂಡಾವನ್ನು ಸರ್ಕಾರ ಇಟ್ಟುಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಶಿವರಾತ್ರಿ ಹಿನ್ನೆಲೆಯಲ್ಲಿ ನಂಜನಗೂಡಿನ ನಂಜುಂಡೇಶ್ವರನ ದರ್ಶನ ಪಡೆದು, ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಸಮ್ಮಿಶ್ರ ಸರ್ಕಾರ ಇದ್ದಾಗ ಕೊಟ್ಟಿದ್ದ ಅನುದಾನವನ್ನು ಬೇರೆ ಕಡೆ ಹಾಕಿದ್ದಾರೆ. ಅಲ್ಲದೇ, ಹಲವು ಯೋಜನೆಗಳಿಗೆ ಕರೆದಿದ್ದ ಟೆಂಡರ್ಗಳಿಗೆ ಈ ಸರ್ಕಾರ ತಡೆಮಾಡಿದೆ ಎಂದು ಟೀಕಿಸಿದರು.
ನಂಜುಂಡೇಶ್ವರನ ದರ್ಶನ ಪಡೆದ ಹೆಚ್ಡಿಕೆ, ಸರ್ಕಾರದ ವಿರುದ್ಧ ವಾಗ್ದಾಳಿ ಸರ್ಕಾರ ಬಜೆಟ್ ಮಂಡನೆ ವೇಳೆಯಲ್ಲಿ ಅಂಕಿ-ಅಂಶಗಳನ್ನು ತೋರಿಸಿದೆ ಅಷ್ಟೇ. ಎತ್ತಿನಹೊಳೆ ಯೋಜನೆ, ಕಾವೇರಿ ಯೋಜನೆ, ಮೇಕೆದಾಟು ಯೋಜನೆ, ಮೇಲ್ದಂಡೆ ಯೋಜನೆ, ಸೇರಿದಂತೆ ಹಲವು ನೀರಾವರಿ ಯೋಜನೆಗಳಿಗೆ ಅನುದಾನ ಹಂಚಿಕೆ ಆಗಿಲ್ಲ. ಬಜೆಟ್ ಬಗ್ಗೆ ದೊಡ್ಡಮಟ್ಟದ ಸಾಧಕ-ಬಾಧಕಗಳಿಲ್ಲ, ಇದೊಂದು ಕಳಪೆ ಬಜೆಟ್ ಎಂದು ಕುಟುಕಿದರು.
ಈ ಸುದ್ದಿಯನ್ನೂ ಓದಿ:ಜೆಡಿಎಸ್ನಲ್ಲಿ ಹೈ ಕಮಾಂಡ್ ಇಲ್ಲ.. ಎಲ್ಲರೂ ಹೈ ಕಮಾಂಡ್ಗಳೇ: ಹೆಚ್ಡಿಕೆ
ಬಿಜೆಪಿ ಶಾಸಕರು ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಪತ್ರ ಬರೆಯುತ್ತಾರೆ. ಆದರೆ, ಪತ್ರ ಪಡೆದುಕೊಂಡು ಕೆಲಸ ಮಾಡುತ್ತಿಲ್ಲ. ಗುತ್ತಿಗೆದಾರರು ಕೊಡುವ ಪರ್ಸೆಂಟೇಜ್ ಮೇಲೆ ಕೆಲಸ ನಡೆಯುತ್ತಿದೆ. ಹಣ ಹೊಡೆಯುವ ದಂಧೆಗೆ ಸರ್ಕಾರ ಹೆಚ್ಚಿನ ಆದ್ಯತೆ ಕೊಡುತ್ತಿದೆ. ಈ ಸರ್ಕಾರಕ್ಕೆ ಅಭಿವೃದ್ಧಿಗೆ ಪೂರಕವಾದ ಚಿಂತನೆಗಳು ಇಲ್ಲವೆಂದು ಪದೇ ಪದೆ ಸಾಬೀತು ಮಾಡುತ್ತಿದ್ದಾರೆ ಎಂದು ಛೇಡಿಸಿದರು.