ಮೈಸೂರು: ನಾನು ಜೆಡಿಎಸ್ ಬಿಟ್ಟು ಹೋಗುವುದಿಲ್ಲ. ಮತ್ತೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಶಾಸಕ ಜಿ ಟಿ ದೇವೇಗೌಡ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರ ಮುಂದೆ ಕಣ್ಣೀರು ಸುರಿಸಿ ಹೇಳಿಕೆ ನೀಡಿದರು.
ಇಂದು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹಾಗೂ ಇತರ ಮುಖಂಡರುಗಳು ಜಿಟಿಡಿ ಅವರ ನಿವಾಸಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಟಿಡಿ, ದೇವೇಗೌಡರಿಗೆ ನನ್ನ ಬಗ್ಗೆ ತುಂಬಾ ಪ್ರೀತಿ ಇದೆ. ನನ್ನನ್ನು ಮರಿ ದೇವೇಗೌಡ ಎಂದು ಕರೆಯುತ್ತಿದ್ದರು. ನಾನು 3 ವರ್ಷಗಳಿಂದ ಜೆಡಿಎಸ್ ಪಕ್ಷದಿಂದ ದೂರ ಉಳಿದಿದ್ದೆ. ಆದರೆ ಆ ಪಕ್ಷದ ಬಗ್ಗೆ ಹಾಗೂ ದೇವೇಗೌಡರ ಬಗ್ಗೆ ನನಗೆ ಪ್ರೀತಿ ಕಡಿಮೆಯಾಗಿರಲಿಲ್ಲ. ಬಹಳ ಕಷ್ಟಪಟ್ಟು ದೊಡ್ಡ ಗೌಡರು ಪ್ರಾದೇಶಿಕ ಪಕ್ಷವನ್ನು ಉಳಿಸಿದ್ದಾರೆ. ಮತ್ತೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ಅವರ ಕನಸು. ಆ ನಿಟ್ಟಿನಲ್ಲಿ ನಾವೆಲ್ಲ ಜೆಡಿಎಸ್ ಅನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತೇವೆ ಎಂದರು.
ದೇವೇಗೌಡರೆದುರು ಕಣ್ಣೀರು ಹಾಕಿದ ಜಿಟಿಡಿ ನಾನು ಯಾವುದೇ ತ್ಯಾಗಕ್ಕೂ ಸಿದ್ಧ. ಕುಮಾರಸ್ವಾಮಿ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡುವುದು ನಮ್ಮ ಮುಂದಿನ ಗುರಿ. ನಾನು ಯಾವುದೇ ಕಾರಣಕ್ಕೂ ಜೆಡಿಎಸ್ ಬಿಟ್ಟು ಹೋಗುವುದಿಲ್ಲ. ನನ್ನನ್ನು ಕಾಂಗ್ರೆಸ್‌ನ ಸಿದ್ದರಾಮಯ್ಯ ಹಾಗೂ ಬಿಜೆಪಿಯವರು ಕರೆದಿದ್ದಾರೆ. ಆದರೆ ನಾನು ಯಾವುದೇ ಕಾರಣಕ್ಕೂ ಬೇರೆ ಪಕ್ಷಗಳಿಗೆ ಹೋಗುವುದಿಲ್ಲ. ಜೆಡಿಎಸ್‌ನಲ್ಲೇ ಉಳಿಯುತ್ತೇನೆ, ಈ ಪಕ್ಷಕ್ಕೆ ಯಾವುದೇ ಕಳಂಕ ತರದ ರೀತಿಯಲ್ಲಿ ನಡೆದುಕೊಳ್ಳುತ್ತೇನೆ ಎಂದು ಕಣ್ಣೀರು ಹಾಕಿದರು.
ಜಿಟಿಡಿ ಮನೆಗೆ ಹೆಚ್‌ಡಿಡಿ ಭೇಟಿ: ಜಿಟಿಡಿ ಮನೆಗೆ ಭೇಟಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ದೇವೇಗೌಡರು, ನಾನು ಜಿ ಟಿ ದೇವೇಗೌಡರನ್ನು ಮರಿ ದೇವೇಗೌಡ ಎಂದು ಕರೆಯುತ್ತೇನೆ. ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇನೆ. ಹಿಂದೆ ಜಿಟಿಡಿ ಬೆಳೆಯಬಾರದು ಎಂದು ಎಂಪಿ ಚುನಾವಣೆಯಲ್ಲಿ ಸೋಲಿಸಿದರು.
ಈಗ ಅವರು ನಮ್ಮ ಜೊತೆಯಿಲ್ಲ ಎಂದು ಸಿದ್ದರಾಮಯ್ಯ ಅವರ ಮೇಲೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ದೇವೇಗೌಡ, ಜಿಟಿಡಿ ಮನೆಗೆ ಬಂದಿದ್ದೇನೆ. ಇವತ್ತು ಎಲ್ಲರೂ ಒಟ್ಟಾಗಿ ಸೇರಿದ್ದೇವೆ, ತುಂಬಾ ಸಂತೋಷವಾಗಿದೆ. ಮುಂದಿನ ವಿಧಾನಸಭೆ ಹಾಗೂ ಪಾರ್ಲಿಮೆಂಟ್ ಚುನಾವಣೆಯನ್ನು ಒಟ್ಟಾಗಿ ಎದುರಿಸಬೇಕು. ನಮ್ಮ ಶಕ್ತಿಯನ್ನು ಒಟ್ಟಾಗಿ ಬಳಸಿಕೊಳ್ಳಬೇಕು. ಜಿ ಟಿ ದೇವೇಗೌಡರು ಜೆಡಿಎಸ್ ಪಕ್ಷ ಬಿಟ್ಟು ಹೋಗುವುದಿಲ್ಲ. ಅವರು ನಮ್ಮ ಜೊತೆಯಲ್ಲೇ ಇರುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ:90 ಮೀ ಎತ್ತರದ ಅಗ್ನಿಶಾಮಕ ಏರಿಯಲ್ ಲ್ಯಾಡರ್ ಲೋಕಾರ್ಪಣೆಗೊಳಿಸಿದ ಸಿಎಂ