ಮೈಸೂರು:ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಚರ್ಮದ ಬ್ಯಾಗ್ಗಳು, ರಬ್ಬರ್, ಪ್ಲಾಸ್ಟಿಕ್‌ನಿಂದ ತಯಾರಿಸಿದ ಮ್ಯಾಟ್‌ಗಳನ್ನು ಗಮನಿಸಿರುತ್ತವೆ. ಜೊತೆಗೆ ಅವುಗಳನ್ನು ಖರೀದಿಸಿ ಬಳಕೆಯನ್ನೂ ಮಾಡಿರುತ್ತೇವೆ. ಆದರೆ, ಇಲ್ಲೊಂದು ಮಹಿಳೆಯರ ತಂಡ ಬಾಳೆ ಗಿಡದ ನಾರಿನಿಂದ ಈ ವ್ಯಾನಿಟಿ ಬ್ಯಾಗ್ಗಳು, ಮ್ಯಾಟ್ಗಳು, ಪೆನ್ ಸ್ಟ್ಯಾಂಡ್, ಪರ್ಸ್ ಹಾಗೂ ವಿವಿಧ ಬುಟ್ಟಿಗಳನ್ನು ಸಿದ್ಧಪಡಿಸಿ ಗಮನ ಸೆಳೆದಿದ್ದಾರೆ.
ಬಾಳೆ ನಾರು ಯಾವುದಕ್ಕೂ ಉಪಯೋಗವಿಲ್ಲ ಎಂದು ಬೀಸಾಡುವುದು ಸಾಮಾನ್ಯ. ಆದರೆ ಇಲ್ಲೊಂದು ನಾರಿಯರ ಗುಂಪು ಆ ನಾರಿನಿಂದಲೂ ವಿವಿಧ ವಸ್ತುಗಳನ್ನು ತಯಾರು ಮಾಡುತ್ತಿದೆ. ನಾರಿನಿಂದ ವಿವಿಧ ವಸ್ತುಗಳನ್ನು ಸಿದ್ಧಪಡಿಸಿ ಜನರಿಗೆ ಪರಿಚಯಿಸುತ್ತಿರುವುದು ಹೆಚ್.ಡಿ.ಕೋಟೆ ತಾಲೂಕಿನ ಮಳಲಿ ಗ್ರಾಮದ ಮಹಿಳೆ ಪಲ್ಲವಿ ಮತ್ತು ಅವರ ತಂಡ.
ಬಾಳೆ ನಾರಿನಿಂದ ವಸ್ತುಗಳನ್ನು ಸಿದ್ಧಪಡಿಸುತ್ತಿರುವ ಮಹಿಳೆಯರು ಪಲ್ಲವಿ ಅವರು ಕಳೆದ 6 ವರ್ಷಗಳಿಂದ ಈ ರೀತಿ ಬಾಳೆ ನಾರಿನಿಂದ ಬಗೆಬಗೆಯ ಬ್ಯಾಗುಗಳು, ಪರ್ಸ್, ಮ್ಯಾಟ್‌ಗಳನ್ನು ಕೈಯಲ್ಲೇ ನೇಯ್ಯುವ ಮೂಲಕ ತಯಾರಿಸುತ್ತಿದ್ದಾರೆ. ಬಾಳೆ ನಾರಿನಿಂದ ಕರಕುಶಲ ವಸ್ತುಗಳನ್ನು ತಯಾರಿಸುವ ವಿಧಾನವನ್ನು ಪಲ್ಲವಿಯವರು ಹಂಪಿಯ ಹೊಸಪೇಟೆ ಸಮೀಪದ ಆನೆಗುಂದಿಯಲ್ಲಿ ತರಬೇತಿ ಪಡೆದಿದ್ದಾರೆ. ತರಬೇತಿ ಮುಗಿದ ಬಳಿಕ ಸ್ಥಳೀಯ ಖಾಸಗಿ ರೆಸಾರ್ಟ್‌ವೊಂದಕ್ಕೆ ತಾವು ನೇಯ್ದ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಅಲ್ಲಿ ಬರುವ ಆದಾಯ ಹೇಳಿಕೊಳ್ಳುವಷ್ಟು ಇರಲಿಲ್ಲ. ಇದರಿಂದ ತಾವೇ ಸ್ವತಃ ಏಕೆ ಸ್ವಯಂ ಉದ್ಯೋಗ ಆರಂಭಿಸಬಾರದು ಎಂದು ಯೋಚಿಸಿ ನಾಲ್ಕು ತಿಂಗಳ ಹಿಂದಷ್ಟೇ 'ಎಸ್ ಎಸ್ ವರ್ಕ್ ಶಾಪ್' ಅನ್ನು ಆರಂಭಿಸಿದ್ದಾರೆ. ಅಲ್ಲಿ ತಮ್ಮಂತ ಮತ್ತಷ್ಟು ಮಹಿಳೆಯರು ತರಬೇತಿ ನೀಡಿ ಅವರಿಗೆ ಉದ್ಯೋಗವಕಾಶವನ್ನು ಕಲ್ಪಿಸಿದ್ದಾರೆ.
ಬಾಳೆ ನಾರಿನಿಂದ ವಸ್ತುಗಳು ಸಿದ್ಧ ಸುತ್ತ ಮುತ್ತಲಿನ ಬಾಳೆ ತೋಟಗಳಿಂದ ನಾರುಗಳನ್ನು ಸಂಗ್ರಹಿಸಿ ಅವುಗಳನ್ನು ನೀರಿನಲ್ಲಿ ನೆನೆಯಲು ಇಟ್ಟು ಬಳಿಕ ಬಿಸಿಲಿನಲ್ಲಿ ಒಣಗಿಸಿ ದಾರದ ರೀತಿ ಎಳೆಗಳನ್ನು ಮಾಡಿಕೊಳ್ಳುತ್ತಾರೆ. ಅವುಗಳನ್ನು ಮ್ಯಾಟ್ ಮೇಲೆ ಚೆನ್ನಾಗಿ ಉಜ್ಜಿ ಅದಕ್ಕೆ ದಾರದ ರೂಪ ನೀಡುತ್ತಾರೆ. ಹೀಗೆ ತಯಾರಾದ ದಾರಗಳನ್ನು ಬಳಸಿಕೊಂಡು ಕೈಯಲ್ಲೇ ಬುಟ್ಟಿಗಳನ್ನು ನೆಯ್ಯುತ್ತಾರೆ. ಯಾವುದೇ ಪ್ಲಾಸ್ಟಿಕ್ ಅಥವಾ ಯಂತ್ರೋಪಕರಣ ಬಳಕೆ ಮಾಡದೆ ಕೈಯಲ್ಲೇ ನೇಯ್ದು ಮಾಡುವ ಈ ವಸ್ತುಗಳು ಸದ್ಯ ಪ್ರವಾಸಿಗರನ್ನು ಆಕರ್ಷಿಸುತ್ತಿವೆ.
ಬಾಳೆ ನಾರಿನಿಂದ ವಸ್ತುಗಳು ತಯಾರು ಸದ್ಯ ಸ್ವಂತ ಉದ್ಯಮವನ್ನು ಆರಂಭಿಸಿ ನಾಲ್ಕೈದು ತಿಂಗಳಷ್ಟೇ ಕಳೆದಿದೆ. ಇದನ್ನು ಮತ್ತಷ್ಟು ವಿಸ್ತರಿಸಬೇಕು. ಇನ್ನಷ್ಟು ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸಬೇಕು ಎಂಬ ಬಯಕೆ ಪಲ್ಲವಿಯವರಲ್ಲಿದೆ. ಆದರೆ, ಅದೆಲ್ಲದ್ದಕ್ಕೂ ಆರ್ಥಿಕ ಸಮಸ್ಯೆ ಕಾಡುತ್ತಿದ್ದು, ಬ್ಯಾಂಕ್‌ನಲ್ಲಿ ಸಾಲದ ಮೊರೆ ಹೋಗಿದ್ದಾರೆ. ಸಾಲ ಸೌಲಭ್ಯ ದೊರಕಿದ ಕೂಡಲೇ ಉದ್ಯಮವನ್ನು ವಿಸ್ತರಿಸುವುದು ಪಲ್ಲವಿಯವರ ಗುರಿ. ಅಲ್ಲದೆ ಸಿದ್ಧಪಡಿಸಿದ ವಸ್ತುಗಳಿಗೆ ಸರಿಯಾದ ಮಾರುಕಟ್ಟೆ ಮತ್ತು ಪ್ರಚಾರವಿಲ್ಲದಿರುವುದರಿಂದ ಸದ್ಯ ಅವುಗಳನ್ನು ರಸ್ತೆ ಬದಿಯಲ್ಲೇ ಇಟ್ಟು ಸಫಾರಿಗೆ ಬರುವ ಪ್ರವಾಸಿಗರಿಗೆ ಹಾಗೂ ಇತರ ಪ್ರಯಾಣಿಕರಿಗೆ ಮಾರಾಟ ಮಾಡಲಾಗುತ್ತಿದ್ದು, ನಮಗೆ ಪ್ರೋತ್ಸಾಹ ಮತ್ತು ಮಾರುಕಟ್ಟೆಯ ಅಗತ್ಯವಿದೆ ಎನ್ನುತ್ತಾರೆ ಪಲ್ಲವಿ.
ಬಾಳೆ ನಾರಿನಿಂದ ವಸ್ತುಗಳು ಸಿದ್ಧ ಪಡಿಸಿದ ಮಹಿಳೆಯರ ತಂಡ ನಾನು ಕಳೆದ 6 ವರ್ಷಗಳಿಂದ ಬಾಳೆ ನಾರಿನಿಂದ ವಿವಿಧ ಬಗೆಯ ವ್ಯಾನಿಟಿ ಬ್ಯಾಗ್ಗಳು, ಪರ್ಸ್ ಹಾಗೂ ಇತರೆ ವಸ್ತುಗಳನ್ನು ತಯಾರಿಸುವುದನ್ನು ಕಲಿತ್ತಿದ್ದೇನೆ. ಬಳಿಕ ಈಗ ನಮ್ಮ ಗ್ರಾಮದ ಕೆಲ ಮಹಿಳೆಯರಿಗೆ ತರಬೇತಿ ನೀಡಿ ಎಲ್ಲರೂ ಒಟ್ಟಿಗೆ ಸ್ವಯಂ ಉದ್ಯೋಗ ಮಾಡುತ್ತಿದ್ದೇವೆ. ಆರ್ಥಿಕ ನೆರವು, ಉತ್ತಮ ಮಾರುಕಟ್ಟೆ ದೊರತರೆ ಮತ್ತಷ್ಟು ಜನರಿಗೆ ಅನುಕೂಲವಾಗಲಿದೆ ಎಂದು ಎಸ್ಎಸ್ ವರ್ಕ್ ಶಾಪ್ ಮಾಲೀಕ ಪಲ್ಲವಿ ತಿಳಿಸಿದರು.
ಇದನ್ನೂ ಓದಿ:'ನಾವು ಜಗತ್ತಿನಲ್ಲಿ ಯಾರಿಗಿಂತಲೂ ಕಡಿಮೆ ಇಲ್ಲ': ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಪ್ರಧಾನಿ ಮೋದಿ