ಮೈಸೂರು:ನಮ್ಮ ಜಲಾಶಯಗಳ ನೀರು ಖಾಲಿ ಮಾಡಿ ಸರ್ವಪಕ್ಷಗಳ ಸಭೆ ಕರೆದು, ಈ ಸಭೆಗೆ ರೈತ ಮುಖಂಡರನ್ನು ಕರೆಯದೇ ಸರ್ಕಾರ ನಾಟಕ ಮಾಡುತ್ತಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆರೋಪಿಸಿದರು.
ಇಂದು ಕಾಡಾ ಕಚೇರಿಯ ಮುಂಭಾಗದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ, ಬಳಿಕ ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, "ನಮ್ಮ ರಾಜ್ಯ ಸರ್ಕಾರ ಜಲಾಶಯಗಳ ನೀರನ್ನು ಖಾಲಿ ಮಾಡಿ, ಸರ್ವಪಕ್ಷಗಳ ಸಭೆ ಕರೆದಿದ್ದಾರೆ. ರೈತರ ನಿಜವಾದ ಸಮಸ್ಯೆಗಳನ್ನು ಕೇಳಬೇಕಾದ ಸರ್ಕಾರ, ಸಭೆಗೆ ರೈತ ಮುಖಂಡರನ್ನೇ ಕರೆಯದೇ ಸರ್ವಪಕ್ಷಗಳ ಸಭೆಯೆಂದು ನಾಟಕ ಮಾಡುತ್ತಿದೆ. ನೀರೆಲ್ಲ ಖಾಲಿಯಾದ ಮೇಲೆ, ಸಭೆ ಕರೆಯುವ ಅವಶ್ಯಕತೆ ಏನಿದೆ. ರೈತರನ್ನು ಸಭೆಗೆ ಕರೆದರೆ, ಅವರ ಪ್ರಶ್ನೆಗಳಿಗೆ ಉತ್ತರ ಕೊಡಲು ಆಗುವುದಿಲ್ಲ. ಅದಕ್ಕಾಗಿ ಸಭೆಗೆ ಕರೆಯುತ್ತಿಲ್ಲ. ಇವರ ನಾಟಕ ಜಗತ್ತಿಗೆ ಗೊತ್ತು. ರೈತರನ್ನು ಹೊರಗಿಟ್ಟು ಸರ್ವಪಕ್ಷಗಳ ಸಭೆಯನ್ನು ನಡೆಸುತ್ತಿರುವುದು ಸರಿಯಲ್ಲ. ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸಬೇಕು. ಇಲ್ಲದಿದ್ದರೆ ಚಳುವಳಿ ತೀವ್ರಗೊಳಿಸುತ್ತೇವೆ" ಎಂದು ಎಚ್ಚರಿಕೆ ನೀಡಿದರು.
'ಡಿ.ಕೆ.ಶಿವಕುಮಾರ್ ಅವರಿಗೆ ತಮಿಳುನಾಡg ಸಿಎಂ ಜೊತೆ ಅವಿನಾಭಾವ ಸಂಬಂಧ': "ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ಅವಿನಾಭಾವ ಸಂಬಂಧವಿದೆ. ಇತ್ತೀಚೆಗೆ ಮಾಧ್ಯಮಗಳಲ್ಲೇ ನೋಡಿದ್ದೆವು. ಬೆಂಗಳೂರು ಏರ್ಪೋರ್ಟ್ಗೆ ತಮಿಳುನಾಡಿನ ಸಿಎಂ ಬಂದಾಗ, ಡಿಸಿಎಂ ಏರ್ಪೋರ್ಟ್ಗೆ ಹೋಗಿ ಸ್ವಾಗತ ಮಾಡಿದ್ದರು. ಇವರ ಸಂಬಂಧಗಳನ್ನು ಉಳಿಸಿಕೊಳ್ಳಲು, ರಾಜ್ಯದ ರೈತರ ಜೀವನವನ್ನೇ ಬಲಿ ಕೊಡುತ್ತಿದ್ದಾರೆ. ಮೊದಲು ರಾಜ್ಯದ ರೈತರ ಹಿತರಕ್ಷಣೆಗೊಸ್ಕರ ಕೆಲಸ ಮಾಡಲಿ" ಎಂದು ಕುರುಬೂರು ಶಾಂತಕುಮಾರ್ ವಾಗ್ದಾಳಿ ನಡೆಸಿದರು.