ಮೈಸೂರು: ಚೀನಾ ರೇಷ್ಮೆ, ಮಲೇಷ್ಯಾದ ಪಾಮ್ ಆಯಿಲ್ ಅಮದು ನೀತಿ ದೇಶದ ಕೊಬ್ಬರಿ ಹಾಗೂ ರೇಷ್ಮೆ ಬೆಳೆಗಾರರನ್ನು ಬೆಲೆ ಕುಸಿತದಿಂದ ಕಂಗಾಲು ಮಾಡಿದೆ. ವಿಶ್ವ ವ್ಯಾಪಾರ ಒಪ್ಪಂದ ಪರಿಣಾಮ ರೈತರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು. ಮೈಸೂರಿನಲ್ಲಿ ಮಾತನಾಡಿದರ ಅವರು, ಕೇಂದ್ರ ಸರ್ಕಾರ ವಿಶ್ವ ವ್ಯಾಪಾರ ಒಪ್ಪಂದ ನೀತಿಯಿಂದಾಗಿ ಮಲೇಷ್ಯಾದ ಪಾಮೊಲಿನ್ ಎಣ್ಣೆ ಹಾಗೂ ಚೀನಾ ದೇಶದಿಂದ ರೇಷ್ಮೆ ಆಮದು ಮಾಡಿಕೊಂಡು. ಸುಂಕವನ್ನ ವಿನಾಯಿತಿ ಗೂಳಿಸಿದ ಪರಿಣಾಮ ತೆಂಗಿನ ಹಾಗೂ ರೇಷ್ಮೆ ಗೂಡು ಬೆಲೆ ಅರ್ಧದಷ್ಟು ಕುಸಿತವಾಗಿದೆ ಎಂದರು.
ಕೂಡಲೇ ತೆಂಗು ಹಾಗೂ ರೇಷ್ಮೆ ಬೆಳೆ ರೈತರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಸದ್ಯದಲ್ಲಿಯೇ ಈ ಬಗ್ಗೆ ರೈತ ಸಮಾವೇಶ ನಡೆಸಿ, ರೈತರ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು. ರಾಜ್ಯದಲ್ಲಿ ಬರಗಾಲದ ಛಾಯೆ ಮೂಡುತ್ತಿದೆ, ಜಲಾಶಯಗಳು ಖಾಲಿಯಾಗುತ್ತಿವೆ. ಕೆರೆಕಟ್ಟೆಗಳು ಒಣಗುತ್ತಿವೆ ಕುಡಿಯುವ ನೀರಿಗೂ ಬರಗಾಲದ ಉಂಟಾಗಿದೆ. ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಬರಗಾಲ ಘೋಷಣೆ ಮಾಡಿ, ಜನ ಜಾನುವಾರುಗಳು ಹಾಗೂ ರೈತರ ಬೆಳೆಗಳನ್ನು ಉಳಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಆಹಾರ ಭದ್ರತೆ ಕಾಯ್ದೆ ಅನ್ಯಾಯ, ಅನ್ನಭಾಗ್ಯ ಯೋಜನೆಗೆ ರಾಜ್ಯದ ರೈತರಿಂದ ಅಕ್ಕಿ, ರಾಗಿ ಜೋಳ ಸಿರಿಧಾನ್ಯಗಳನ್ನು ಖರೀದಿಸಿ ಎಂಎಸ್‌ಪಿಗೆ ಹೆಚ್ಚುವರಿ ಪ್ರೋತ್ಸಾಹಧನ ನೀಡಿ ಖರೀದಿಸಬೇಕು. ಕೃಷಿ ಉತ್ಪನ್ನಗಳ ಮೇಲೆ ರಸಗೊಬ್ಬರ, ಕೀಟನಾಶಕ, ಹನಿ ನೀರಾವರಿ ಉಪಕರಣಗಳ ಮೇಲೆ ವಿಧಿಸಿರುವ ಜಿಎಸ್‌ಟಿ ರದ್ದುಗೊಳಿಸಬೇಕು. ಜೂಜಾಟ ಆಟ, ಕುದುರೆ ರೇಸ್ ಬೆಟ್ಟಿಂಗ್, ಕ್ಯಾಸಿನೂಗಳಿಗೆ ಜಿಎಸ್‌ಟಿ ಇಲ್ಲ, ರೈತರಿಗೆ ಯಾಕೆ? ಎಂದು ಪ್ರಶ್ನಿಸಿದರು.
ಕೃಷಿ ಸಾಲ ನೀತಿ ಬದಲಾವಣೆ ಮಾಡಬೇಕು:ಪ್ರಸಕ್ತ ಕೃಷಿ ರೈತರ ಸಾಲ ನೀತಿ ಬದಲಾಯಿಸಿ. ಕೃಷಿ ಭೂಮಿ ಮೌಲ್ಯದ ಶೇಕಡ 75ರಷ್ಟು ಸಾಲ ನೀಡುವಂತೆ ನೀತಿ ರೂಪಿಸಿ. ಕೃಷಿ ಸಾಲಕ್ಕೆ ಸಿಬಿಲ್ ನೀತಿ ಕೈಬಿಡಬೇಕು. ಕಬ್ಬಿನ ಎಫ್ಆರ್ಪಿ ದರವನ್ನು ರೈತರ ಹೊಲದಲ್ಲಿನ ದರ ಎಂದು ನಿಗದಿಪಡಿಸಬೇಕು. ಕಬ್ಬು ಕಟಾವು, ಸಾಗಾಣಿಕೆ ಸುಲಿಗೆ ತಪ್ಪಿಸಲು ಅತ್ಯವಶ್ಯಕ ಎಲ್ಲ ಕೃಷಿ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿಗೊಳಿಸಿ ಶಾಸನಾತ್ಮಕ ಖಾತ್ರಿ ನೀಡುವಂತೆ ಕಾನೂನು ಜಾರಿ ತರಬೇಕು. ಕನಿಷ್ಠ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನ ತೆಲಂಗಾಣ, ಆಂಧ್ರಪ್ರದೇಶ, ಪಂಜಾಬ್ ಮಾದರಿಯಲ್ಲಿ ಪ್ರತಿ ಹೋಬಳಿ ಕೇಂದ್ರಗಳಲ್ಲಿ ಸಕಾಲಕ್ಕೆ ತೆರೆಯುವಂತಾಗಬೇಕು. ಖರೀದಿಸಿದ ಉತ್ಪನ್ನಗಳಿಗೆ ಒಂದು ವಾರದಲ್ಲಿ ರೈತರಿಗೆ ಹಣ ಪಾವತಿ ಮಾಡುವಂತಾಗಬೇಕು ಎಂದರು.