ಮೈಸೂರು:ಇತ್ತೀಚೆಗೆ ಯುವಕರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು. ಇದಕ್ಕೆ ಕಾರಣವೇನು? ಕೋವಿಡ್ ಲಸಿಕೆ ಪಡೆದವರಲ್ಲಿ ಹೆಚ್ಚಾಗಿ ಹೃದಯಾಘಾತ ಆಗುತ್ತಿದೆಯೇ. ಜೊತೆಗೆ ಹೃದಯಾಘಾತದಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು ಎಂಬ ಬಗ್ಗೆ ತಜ್ಞ ವೈದ್ಯರು ನೀಡುವ ಸಲಹೆ ಏನು. ಈ ಬಗ್ಗೆ ಹಿರಿಯ ಹೃದ್ರೋಗ ತಜ್ಞರಾದ ಡಾ.ಉಪೇಂದ್ರ ಶೆಣೈ ಹಾಗೂ ಡಾ.ಸಿ ಪಿ.ಕೇಶವ ಮೂರ್ತಿ ಈಟಿವಿ ಭಾರತ್ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.
ಡಾ.ಉಪೇಂದ್ರ ಶೆಣೈ ಹೇಳುವುದೇನು :ಭಾರತದಲ್ಲಿ ಯುವಕರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಇದಕ್ಕೆ ಪ್ರಮುಖ ಕಾರಣ ಜೀವನ ಶೈಲಿ, ಒತ್ತಡ, ಆರೋಗ್ಯಕರವಲ್ಲದ ಆಹಾರ ಸೇವನೆ, ಮಲಗುವ ವಿಧಾನ ಮುಖ್ಯ ಕಾರಣವಾಗಿದೆ. ಹಿಂದೆ ಮಕ್ಕಳು ವೃದ್ಧ ತಂದೆ ತಾಯಿಗಳನ್ನು ಹೃದಯಾಘಾತವಾಗಿದೆ ಎಂದು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದರು. ಆದರೆ, ಈಗ ವೃದ್ಧ ತಂದೆ ತಾಯಿಗಳು ತಮ್ಮ ಮಕ್ಕಳನ್ನು ಹೃದಯಾಘಾತವಾಗಿದೆ ಎಂದು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾರೆ. ಇದಕ್ಕೆ ಕಾರಣ ಯುವಕರ ಜೀವನ ಶೈಲಿ, ಧೂಮಪಾನ, ಜಂಕ್ ಫುಡ್ ಹೆಚ್ಚಾಗಿ ಸೇವನೆ ಮಾಡುವುದು, ದಿನನಿತ್ಯ ವ್ಯಾಯಾಮ ಮಾಡದೇ ಇರುವುದು, ಒತ್ತಡದ ಜೀವನ, ಅತಿಯಾದ ಮಾಂಸಾಹಾರ ಸೇವನೆ, ಎಣ್ಣೆ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದು. ಇದು ಯುವಕರಲ್ಲಿ ಹೃದಯಾಘಾತ ಹೆಚ್ಚಾಗಲು ಕಾರಣವಾಗಿದೆ ಎನ್ನುತ್ತಾರೆ ಡಾ.ಉಪೇಂದ್ರ ಶೆಣೈ.
ಹೃದಯಾಘಾತ ತಡೆಯಲು ಹೀಗೆ ಮಾಡಿ:ಹೃದಯಾಘಾತದಿಂದ ತಪ್ಪಿಸಿಕೊಳ್ಳಲು ಮುಖ್ಯವಾಗಿ ನಿತ್ಯ ವ್ಯಾಯಾಮ, ಜೀವನ ಶೈಲಿ ಬದಲಾವಣೆ, ಯೋಗ, ಧ್ಯಾನ, ಮಿತ ಆಹಾರ ಸೇವನೆ, ಒತ್ತಡ ರಹಿತ ಜೀವನ ಜೊತೆಗೆ ಆರೋಗ್ಯಕರವಾದ ಆಹಾರ ಸೇವನೆ ಮುಖ್ಯವಾಗಿದ್ದು. ಕೋವಿಡ್ ಲಸಿಕೆಯಿಂದ ಹೆಚ್ಚಾಗಿ ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬುದಕ್ಕೆ ಯಾವುದೇ ರೀತಿಯ ಸಾಕ್ಷ್ಯಾಧಾರಗಳು ಇಲ್ಲ ಎಂದು ಡಾ.ಉಪೇಂದ್ರ ಶೆಣೈ ವಿವರಿಸಿದ್ದಾರೆ.