ಮೈಸೂರು: ರಾಜ್ಯದಲ್ಲಿ ನಾಲ್ಕು ಕಡೆಗಳಲ್ಲಿ ಹೊಸದಾಗಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.
ಮೈಸೂರಿನಲ್ಲಿ ಪುರುಷರ ವೈದ್ಯಕೀಯ ಹಾಸ್ಟೆಲ್ ಕಟ್ಟಡವನ್ನು ಪರಿಶೀಲನೆ ನಡೆಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಹಾವೇರಿ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಹೊಸದಾಗಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಾಲೇಜು ತೆರೆಯಲಾಗುವುದು ಎಂದರು.
ವೈದ್ಯಕೀಯ ಸಚಿವ ಡಾ.ಕೆ. ಸುಧಾಕರ್ ರಾಜ್ಯದಲ್ಲಿ ಕೊರೊನಾ ಶೇ. 2 ರಷ್ಟು ಇದೆ. ಚಳಿಗಾಲದಲ್ಲಿ ಸಾರ್ವಜನಿಕರು ಕೊರೊನಾ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಪೋಸ್ಟ್ ಕೋವಿಡ್ ಸೆಂಟರ್ಗಳನ್ನು ಜಿಲ್ಲೆಗಳಲ್ಲಿ ತೆರೆಯಲಾಗುವುದು ಎಂದು ತಿಳಿಸಿದರು.
ತಲಕಾಡಿನಲ್ಲಿ ಪಂಚಲಿಂಗ ದರ್ಶನ ಕಾರ್ಯಕ್ರಮ ಮಾಡಲು ತಾಂತ್ರಿಕ ಸಮಿತಿ ವರದಿ ನಂತರ ನಿರ್ಧರಿಸಲಾಗುವುದು. ದಸರಾದಂತೆ ಇದಕ್ಕೂ ಎಚ್ಚರಿಕೆ ವಹಿಸಲಾಗುವುದು ಎಂದು ಹೇಳಿದರು.
ವೈದ್ಯಕೀಯ ಹಾಸ್ಟೆಲ್ ಕಟ್ಟಡಕ್ಕೆ 50 ವರ್ಷ ಮೀರಿದೆ. ಈ ಕಟ್ಟಡವನ್ನು ನವೀಕರಿಸಬೇಕೆ ಅಥವಾ ಹೊಸದಾಗಿ ಕಟ್ಟಡ ಕಟ್ಟಬೇಕೆ ಎಂಬುವುದರ ಬಗ್ಗೆ ವರದಿ ನೀಡುವಂತೆ ಇಂಜಿನಿಯರ್ಗೆ ಸೂಚನೆ ನೀಡಲಾಗಿದೆ. ರಾಜೀವ್ ಗಾಂಧಿ ವಿಶ್ವವಿದ್ಯಾಲಯ ನಿಧಿ ಹಾಗೂ ವೈದ್ಯಕೀಯ ಇಲಾಖೆ ನಿಧಿಯಿಂದ ಹಣ ಭರಿಸಲಾಗುವುದು. ಇಲ್ಲವಾದರೆ, ಸಿಎಂ ಜೊತೆ ಚರ್ಚಿಸಿ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದರು.