ಮೈಸೂರು:ಜಮೀನಿಗೆ ನುಗ್ಗಿದ ಕಾಡಾನೆಗಳು ತೆಂಗು, ಸೋಲಾರ್ ತಂತಿ ತುಳಿದು ಬೆಳೆ ನಾಶ ಮಾಡಿರುವ ಘಟನೆ ಸರಗೂರು ತಾಲೂಕಿನ ಹಳೇ ಹೆಗುಡಿಲು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಲ್ಲಿಕಾರ್ಜುನಯ್ಯ ಎಂಬುವರ ಜಮೀನಿಗೆ ನುಗ್ಗಿದ ಆನೆಗಳು ಬೆಳೆ ನಾಶ ಮಾಡಿವೆ. ಕಾಡು ಪ್ರಾಣಿಗಳ ಉಪಟಳ ದಿನೇ ದಿನೆ ಜಾಸ್ತಿಯಾಗುತ್ತಿದೆ. ಕಾಡು ಪ್ರಾಣಿಗಳು ಬಾರದಂತೆ ವ್ಯವಸ್ಥೆ ಮಾಡಿ ಅಂದ್ರೆ ಅರಣ್ಯಾಧಿಕಾರಿಗಳು ಉಡಾಫೆಯಾಗಿ ಮಾತನಾಡುತ್ತಾರೆ. ಆನೆ ಕಾವಲುಗಾರರು ಇದ್ದರೂ ಸಹ ಮೂರು ದಿನದಿಂದ ಆನೆಗಳು ಬರ್ತಾನೆ ಇವೆ. ಕಾವಲುಗಾರರು ಸರಿಯಾದ ರೀತಿಯಲ್ಲಿ ಕಾವಲು ಕಾಯುತ್ತಿಲ್ಲ. ಕಾವಲುಗಾರರಿಗೆ ಕೇಳಿದರೆ, ನಾವೇನು ಮಾಡಕ್ಕಾಗಲ್ಲ ಅಂತ ಹೇಳ್ತಾರೆ.
ತೋಟದಲ್ಲಿ ಬೆಳೆದ ಹಲವಾರು ಬೆಳೆ, ತೆಂಗು ಸಸಿಗಳನ್ನು ಆನೆಗಳು ತಿಂದು ಹಾಕಿವೆ. ತೋಟದಲ್ಲಿ ಸೋಲಾರ್ ಅಳವಡಿಸಿದ್ದೇವೆ. ಅದನ್ನೂ ಕಿತ್ತು ಹಾಕಿದೆ. ಆನೆ ಮತ್ತೆ ಮತ್ತೆ ತೋಟಕ್ಕೆ ಲಗ್ಗೆ ಇಟ್ಟು ಅನಾಹುತ ಮಾಡುತ್ತಿದೆ. ಆನೆ ಬಾರದಂತೆ ನೋಡಿಕೊಳ್ಳಿ. ನಿಮಗೆ ಕೈಮುಗಿದು ಕೇಳಿಕೊಳ್ಳುತ್ತೇವೆ. ಏನಾದರೂ ಪರಿಹಾರ ಒದಗಿಸಿ ಎಂದು ತೋಟ ನೋಡಿಕೊಳ್ಳುವ ಮಹಿಳೆ ಶಿವಮ್ಮ ಅಳಲು ತೋಡಿಕೊಂಡಿದ್ದಾರೆ.
ಹತ್ತಿ, ಚೆಂಡು ಹೂ, ತೆಂಗು ಬೆಳೆಗಳಿವೆ. ಜಮೀನು ಕಾಡಂಚಿನಲ್ಲಿ ಇರುವುದರಿಂದ ಆನೆ, ಹಂದಿ, ಇನ್ನಿತರ ಕಾಡುಪ್ರಾಣಿಗಳಿಂದ ನಾಶವಾಗುತ್ತಿವೆ. ಕಾಡಂಚಿನಲ್ಲಿ ಟ್ರೆಂಚ್ ತೆಗೆದು ಸುಮಾರು ಐದು ವರ್ಷವಾಗಿದೆ. ಈಗ ಹೂಳು ತುಂಬಿಕೊಂಡು ಆನೆಗಳು ಸರಾಗವಾಗಿ ಬರುವಂತಾಗಿದೆ. ಸೋಲಾರ್ ಹಾಕಿದ್ದರೂ ಕ್ಯಾರೇ ಎನ್ನದೆ ಆನೆಗಳು ಜಮೀನುಗಳತ್ತ ಲಗ್ಗೆ ಇಡುತ್ತಿವೆ.
ಇದನ್ನೂ ಓದಿ:ಒಂದೇ ಒಂದು ಮೆಸೇಜ್ಗೆ ಮಂಗಳಮುಖಿ ಮನೆ ಬಾಗಿಲಿಗೆ ಆಹಾರ ಸಾಮಗ್ರಿ ತಲುಪಿಸಿದ ಕಿಚ್ಚ