ಮೈಸೂರು: ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿನ ಕೋವಿಡ್ ಹಾಸಿಗೆ ನಿರ್ವಹಣೆಯಲ್ಲಿ ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ವೈದ್ಯಕೀಯ ಶಿಕ್ಷಣ, ಆರೋಗ್ಯ ಇಲಾಖೆ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಏಕಗವಾಕ್ಷಿ ನಿರ್ವಹಣೆಗಾಗಿ ಇಬ್ಬರು ವಿಶೇಷ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು. ಕೊರೊನಾ ರೋಗಿಗಳು ಹಾಸಿಗೆಗಳು ಇಲ್ಲವೆಂದು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ಅಲೆಯುವುದು ತಪ್ಪಿಸಬೇಕು. ಕೊರೊನಾ ನಿಯಂತ್ರಣ ಮಾಡಬೇಕು ಎಂಬ ಉದ್ದೇಶ ನಮ್ಮದಾಗಿದೆ ಎಂದರು.
ಖಾಸಗಿ ಆಸ್ಪತ್ರೆಗಳು ಹಂತಹಂತವಾಗಿ ರಾಜ್ಯ ಸರ್ಕಾರ ನಿಗದಿಪಡಿಸಿದ ಹಾಸಿಗೆಗಳನ್ನು ನೀಡಲಿವೆ. ನೀಡದೇ ಇದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ರ‍್ಯಾಪಿಡ್ ಟೆಸ್ಟ್ ಕಡಿಮೆ ಮಾಡಿ, ಆರ್ಟಿಪಿಸಿಆರ್ ಟೆಸ್ಟ್ ಹೆಚ್ಚಳ ಮಾಡುವಂತೆ ಸೂಚನೆ ನೀಡಲಾಗುವುದು ಎಂದು ಹೇಳಿದರು.