ಮೈಸೂರು: ಕಾವ್ಯ ಮನರಂಜನೆಗಾಗಿ ಅಲ್ಲ, ಅದು ಸಮಾಜದ ಸುಧಾರಣೆಗೆ ಬಹಳ ಪ್ರಮುಖ ಅಸ್ತ್ರ ಎಂದು ನಾಡಿನ ಖ್ಯಾತ ಕವಯಿತ್ರಿ ಶಶಿಕಲಾ ವಸ್ತ್ರದ ಅವರು ತಿಳಿಸಿದರು. ಇಂದು ನಗರದ ಕಲಾಮಂದಿರದಲ್ಲಿ ದಸರಾ ಮಹೋತ್ಸವದ ನಿಮಿತ್ತ ದಸರಾ ಕವಿಗೋಷ್ಠಿ ಉಪ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪ್ರಧಾನ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಕವಿಗಳು ಹಾಗೂ ಕವಿತೆಗಳು ಜೀವಂತವಾಗಿರುವ ಈ ಕಾಲವೇ ಸುವರ್ಣಕಾಲ.
ಮೈಸೂರು ದಸರಾ ಮಹೋತ್ಸವದ ಅವಿಭಾಜ್ಯ ಅಂಗವಾಗಿ ಕವಿಗೋಷ್ಠಿ ನಡೆಸಲಾಗುತ್ತಿದೆ. ನಮಗೆ ಕಾವ್ಯ ಯಾಕೆ ಬೇಕು ಎಂಬುದರ ಬಗ್ಗೆ ನಾವು ಅರಿಯಬೇಕು. ಕಾವ್ಯ ಕೇವಲ ಮನರಂಜನೆಗಾಗಿ ಅಲ್ಲ. ಸೌಹಾರ್ದತೆ, ಸದ್ಭಾವನೆ, ಸದಭಿರುಚಿಗಳನ್ನು ಬೆಳೆಸುವಲ್ಲಿ ನಾವು ಮನಸ್ಸಿಗೆ ಒತ್ತು ನೀಡಬೇಕು. ಆತ್ಮಕ್ಕೆ ನೆಮ್ಮದಿ ಮುಖ್ಯ, ಸಾಹಿತ್ಯ ಅದನ್ನು ಒದಗಿಸುತ್ತದೆ ಎಂದು ತಿಳಿಸಿದರು.
ನಾಡು ನುಡಿ ಹಾಗೂ ಸಂಸ್ಕೃತಿ ಉಳಿದರೆ ನಮ್ಮ ಕನ್ನಡದ ಅಸ್ತಿತ್ವ ಉಳಿಯುತ್ತದೆ. ನಮ್ಮ ಭಾಷೆ ಸಂಸ್ಕೃತಿ ಸಾಹಿತ್ಯ ಉಳಿಸಿಕೊಳ್ಳುವುದು ಅನಿವಾರ್ಯ ಇದನ್ನು ನಾವು ಮನದಟ್ಟನೆ ಮಾಡಿಕೊಳ್ಳಬೇಕು. ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲ ಕನ್ನಡಿಗರದ್ದು. ಯಾವ ಭಾಷೆಯನ್ನು ನಾವು ಹೆಚ್ಚು ಬಳಸುವುದಿಲ್ಲವೋ ಆ ಭಾಷೆ ಹೆಚ್ಚು ಬದುಕುವುದಿಲ್ಲ ಎಂಬ ಹಿರಿಯರ ಮಾತಿನಂತೆ, ಕನ್ನಡ ಭಾಷೆ ನಮ್ಮ ತಾಯಿ, ಅದಿಲ್ಲದೆ ನಮ್ಮ ಬದುಕಿಲ್ಲ. ಯಾವುದೇ ರಾಜ್ಯಕ್ಕೆ ಹೋದರು ಅಲ್ಲಿ ಆ ರಾಜ್ಯದವರು ಆ ರಾಜ್ಯದ ಭಾಷೆಯನ್ನು ಬಿಟ್ಟು ಬೇರೆ ಭಾಷೆಯಲ್ಲಿ ಮಾತನಾಡುವುದಿಲ್ಲ. ಆದರೆ, ನಮ್ಮಲ್ಲಿ ಹೊರ ರಾಜ್ಯದವರ ಜೊತೆ ಸಂವಹನ ಮಾಡುವಾಗ ಬಹುತೇಕ ಅವರ ಭಾಷೆಯಲ್ಲಿ ಮಾತನಾಡಲು ಪ್ರಯತ್ನಿಸುತ್ತೇವೆ. ಇತರ ಭಾಷೆಗಳನ್ನು ಕಲಿಯುವುದು ಸಂತೋಷ. ಆದರೆ, ನಮ್ಮ ಭಾಷೆಯನ್ನು ಉಳಿಸಿಕೊಳ್ಳುವುದು ಜವಾಬ್ದಾರಿ ಎಂದರು.