ಮೈಸೂರು:ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದಿಂದ ಪತಿ ತನ್ನ ನಾದಿನಿಯ ಗಂಡನನ್ನು ಹತ್ಯೆಗೈದ ಘಟನೆ ನಗರದ ಕಾಕರವಾಡಿ (ಲಕ್ಷ್ಮಿಪುರಂ)ನಲ್ಲಿ ಶನಿವಾರ ನಡೆದಿದೆ. ಮೈಸೂರು ತಾಲೂಕು ಸರಕಾರಿ ಉತ್ತನಹಳ್ಳಿ ನಿವಾಸಿ ಗಾರೆ ಕೆಲಸಗಾರ ರಾಮಣ್ಣ (45) ಕೊಲೆಯಾದವರು. ಲಾಲ್ ಬಹದ್ದೂರ್ ಶಾಸ್ತ್ರಿ ನಗರದ ನಿವಾಸಿ ಹಾಗೂ ನಿವೃತ್ತ ಸರ್ಕಾರಿ ನೌಕರ ಶಿವರುದ್ರ (62) ಕೊಲೆ ಆರೋಪಿ.
ಪ್ರಕರಣದ ಸಂಪೂರ್ಣ ವಿವರ: ಶಿವರುದ್ರ ಮತ್ತು ರಾಮಣ್ಣ ಕ್ರಮವಾಗಿ ಅಕ್ಕ ಮತ್ತು ತಂಗಿಯನ್ನು ಮದುವೆಯಾಗಿದ್ದರು. ಶಿವರುದ್ರ ಪತ್ನಿಯೊಂದಿಗೆ ರಾಮಣ್ಣ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆಯಾಗಿದೆ. ರಾಮಣ್ಣನ ಮೇಲೆ ಶಿವರುದ್ರ ದ್ವೇಷ ಬೆಳೆಸಿಕೊಂಡಿದ್ದ. ಕಾಕರವಾಡಿಯ ಉಸ್ಮಾನಿಯಾ ರಸ್ತೆಯ ಕಟ್ಟಡದಲ್ಲಿ ಶುಕ್ರವಾರ ರಾಮಣ್ಣ ಗಾರೆ ಕೆಲಸ ಮಾಡಲು ಬಂದಿದ್ದರು. ಅಲ್ಲಿಗೆ ಬಂದ ಶಿವರುದ್ರ ಜಗಳ ತೆಗೆದು ರಾಮಣ್ಣಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ.
ತೀವ್ರವಾಗಿ ಗಾಯಗೊಂಡಿದ್ದ ರಾಮಣ್ಣ ಅವರನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ:ರಾಯಚೂರಿನಲ್ಲಿ ಶೀಲ ಶಂಕಿಸಿ ಚಾಕುವಿನಿಂದ ಇರಿದು ಪತ್ನಿ ಕೊಂದ ಪತಿ