ಮೈಸೂರು: ಬ್ಯಾಂಕಿಗೆ ಹಣ ಕಟ್ಟಲು ಬಂದಿದ್ದ ಖಾಸಗಿ ಕಂಪನಿ ಸಿಬ್ಬಂದಿ ಕಣ್ಣಿಗೆ ಖಾರದ ಪುಡಿ ಎರಚಿ, ಹಣವಿದ್ದ ಬ್ಯಾಗ್ ದೋಚಿ ಖದೀಮ ಪರಾರಿಯಾಗಿರುವ ಘಟನೆ ನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ಖಾಸಗಿ ಕಂಪನಿಯ ಬಿಲ್ ಕಲೆಕ್ಟರ್ ಆಗಿರುವ ಕೆ.ತುಳಸಿದಾಸ್ ಎಂಬುವವರ ಬಳಿ ಹಣವಿದ್ದ ಬ್ಯಾಗ್ ಅನ್ನು ಖದೀಮ ಬ್ಯಾಂಕಿನ ಮುಂದೆಯೇ ಅಪಹರಿಸಿಕೊಂಡು ಹೋಗಿದ್ದಾನೆ.
6 ಲಕ್ಷ ಹಣವಿದ್ದ ಬ್ಯಾಗ್ ದರೋಡೆ:ತುಳಸಿದಾಸ್ ನಿತ್ಯ ಬೆಳಗ್ಗೆ ಬ್ಯಾಗ್ನಲ್ಲಿ ಕಂಪನಿಯ ಹಣ ಇಟ್ಟುಕೊಂಡು ಬ್ಯಾಂಕ್ಗೆ ಸಂದಾಯ ಮಾಡಲು ತೆರಳುತ್ತಿದ್ದರು. ನಿನ್ನೆ ಎಂದಿನಂತೆ ಬ್ಯಾಂಕ್ಗೆ ಹಣ ಸಂದಾಯ ಮಾಡಲು ಕಂಪನಿಯ ವಾಹನದಿಂದ ಇಳಿದು, ಹಣವಿದ್ದ ಬ್ಯಾಗ್ ಕೈನಲ್ಲಿ ಹಿಡಿದು ಬ್ಯಾಂಕ್ ಬಳಿಗೆ ತೆರಳಲು ಮುಂದಾಗಿದ್ದರು. ಇದೇ ವೇಳೆ ಖದೀಮನೊಬ್ಬ ಏಕಾಏಕಿ ಬಂದು ತುಳಸಿದಾಸ್ ಕಣ್ಣಿಗೆ ಖಾರದಪುಡಿ ಎರಚಿ ಹಣವಿದ್ದ ಬ್ಯಾಗ್ ಎಗರಿಸಿ ಪರಾರಿಯಾಗಿದ್ದಾನೆ. ಕಳವಾದ ಬ್ಯಾಗ್ನಲ್ಲಿ 6 ಲಕ್ಷ ನಗದು ಹಾಗೂ ಚೆಕ್ಗಳಿದ್ದವು ಎಂದು ತಿಳಿದು ಬಂದಿದೆ. ಕಳ್ಳ ಕ್ಷಣಮಾತ್ರದಲ್ಲಿ ತುಳಸಿದಾಸ್ ಅವರ ಕೈನಲ್ಲಿದ್ದ ಬ್ಯಾಗ್ ಕಿತ್ತುಕೊಂಡು, ಬೈಕ್ನಲ್ಲಿ ಕಾಯುತ್ತಿದ್ದ ಸಹಚರನೊಂದಿಗೆ ಪರಾರಿಯಾಗಿದ್ದಾನೆ.
ಪೂರ್ವ ಯೋಜಿತ ದರೋಡೆ ಎಂಬ ಶಂಕೆ:ಎಸ್ಎಸ್ಸಿ ಕಂಪನಿಯ ಬಿಲ್ ಕಲೆಕ್ಟರ್ ಕೆ.ತುಳಸಿದಾಸ್ ಪ್ರತಿದಿನ ಬೆಳಗ್ಗೆ ಹಣ ಸಂದಾಯ ಮಾಡಲು ಬ್ಯಾಂಕ್ಗೆ ಬರುತ್ತಿರುವುದನ್ನು ಖದೀಮರು ಕೆಲವು ದಿನಗಳಿಂದ ನಿಗಾವಹಿಸಿ, ಈ ಕೃತ್ಯ ಎಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ಡಿಸಿಪಿ ಮುತ್ತುರಾಜ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ. ಇನ್ನು ಖದೀಮನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.