ಮೈಸೂರು:ತಾಲೂಕು ಮತ್ತು ಹಳ್ಳಿಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಪಾಸಿಟಿವ್ ಕೇಸ್ ಬರುತ್ತಿದ್ದು, ಜಿಲ್ಲೆಯಲ್ಲಿ ಸಮುದಾಯ ಮಟ್ಟದಲ್ಲಿ ಸೋಂಕು ಹಬ್ಬಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಳವಳ ವ್ಯಕ್ತಪಡಿಸಿದರು.
ಫೇಸ್ಬುಕ್ ಲೈವ್ನಲ್ಲಿ ಮಾತನಾಡಿದ ಅವರು, ಆರ್ಟಿಪಿಸಿಆರ್ ಟೆಸ್ಟ್‌ನಲ್ಲಿ ತಪ್ಪು ಫಲಿತಾಂಶ ಬರುತ್ತಿವೆ. ಟೆಸ್ಟಿಂಗ್‌ನ ಶೇ 30ರಷ್ಟು ಫಲಿತಾಂಶ ತಪ್ಪಾಗಿ ಕಂಡುಬಂದಿದೆ. ಇದೇ ಕಾರಣದಿಂದ ನೆಗೆಟಿವ್ ಬಂದವರಲ್ಲೂ ಸೋಂಕು ಇದ್ದರೆ ಅವರು ಮೃತಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಟೆಸ್ಟಿಂಗ್ ಕಡಿಮೆ ಮಾಡಿದ್ದೇವೆ. ಮೈಸೂರಿನಲ್ಲಿ ಹೆಚ್ಚು ರ್ಯಾಪಿಡ್ ಟೆಸ್ಟ್ ಮಾತ್ರ ಮಾಡುತ್ತಿದ್ದೇವೆ ಎಂದರು.
ಫೇಸ್ಬುಕ್ ಲೈವ್ನಲ್ಲಿ ಮಾತನಾಡಿದ ರೋಹಿಣಿ ಸಿಂಧೂರಿ ಮೈಸೂರಿನಲ್ಲಿ ಈವರೆಗೆ 18 ಸಾವಿರ ಸಕ್ರಿಯ ಪ್ರಕರಣಗಳಿವೆ. 20 ದಿನದ ಹಿಂದೆ ತಾಲೂಕುಗಳಲ್ಲಿ ಶೇ 10ರಷ್ಟು ಹಾಗೂ ನಗರದಲ್ಲಿ ಶೇ 90ರಷ್ಟು ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದವು. ಆದರೆ, ಇಂದಿನ ಅಂಕಿ ಅಂಶದ ಪ್ರಕಾರ ಶೇ 50ರಷ್ಟು ಪಾಸಿಟಿವ್ ಗ್ರಾಮಾಂತರ ಪ್ರದೇಶಗಳಿಂದ ಬಂದಿವೆ. ಇದರ ಅರ್ಥ ಸೋಂಕು ಸಮುದಾಯದ ಹಂತ ತಲುಪಿದೆ ಎಂದರು.
ಇದಕ್ಕಾಗಿ ನಾವು ಪಂಚಸೂತ್ರ ಕಾರ್ಯಕ್ರಮದೊಂದಿಗೆ ಕೋವಿಡ್ ಮಿತ್ರ ಆರಂಭಿಸಿದ್ದೇವೆ. ತಾಲೂಕಿನಲ್ಲಿ ಇರುವ 150 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಮಿತ್ರ ಮಾಡಿದ್ದೇವೆ. ಮೊದಲ 5 ದಿನ ಔಷಧಿ ಪಡೆಯುವುದು, ಹೋಂ ಐಸೋಲೇಷನ್‌ನಲ್ಲಿ ಇರುವುದು ಇದರ ಮುಖ್ಯ ಉದ್ದೇಶ. ನನ್ನ ಕುಟುಂಬದಲ್ಲಿ ಎಲ್ಲರಿಗೂ ಪಾಸಿಟಿವ್ ಆಗಿತ್ತು. ನನ್ನೊಬ್ಬಳಿಗೆ ನೆಗೆಟಿವ್ ಬಂದಿತ್ತು. ನಾವು ಸಹ ಮೊದಲ 5 ದಿನ ಔಷಧೋಪಚಾರ ಮಾಡಿಕೊಂಡಿದ್ದೇವೆ. ನನ್ನನ್ನು ಸೇರಿದಂತೆ ಎಲ್ಲರೂ ಮಾತ್ರೆ, ಔಷಧಿ ಪಡೆದುಕೊಂಡೆವು. ಈಗ ನಮ್ಮ ಮನೆಯಲ್ಲಿ ಎಲ್ಲರೂ ಗುಣಮುಖರಾಗುತ್ತಿದ್ದಾರೆ ಎಂದು ಹೇಳಿದರು.
ಸರ್ಕಾರ ಸೂಚಿಸಿದ ಮಾತ್ರೆಗಳನ್ನು ಸೇವಿಸಬೇಕು. ಇದು ನನಗೆ ನನ್ನ ಕುಟುಂಬದ ಸೋಂಕಿನಿಂದ ಅನುಭವವಾಗಿದೆ. ಸದ್ಯ ಮೈಸೂರಿನಲ್ಲಿ 9 ಸಾವಿರ ಜನ ಹೋಂ ಐಸೋಲೇಷನ್ ಇದ್ದಾರೆ. ಕೋವಿಡ್ ಮಿತ್ರ ಕಾರ್ಯಕ್ರಮ ಎಲ್ಲರ ಮನೆಗೆ ತಲುಪಬೇಕು. ಪ್ರೈಮರಿ ಸಂಪರ್ಕದವರು ಮೆಡಿಸನ್ ತೆಗೆದುಕೊಳ್ಳಬೇಕು. ಮೈಸೂರು ಜಿಲ್ಲೆಯಲ್ಲಿ ಶೇ 68ರಷ್ಟು ವಾಕ್ಸಿನ್ ಹಾಕಲಾಗಿದೆ. ಶೇ 95ರಷ್ಟು ಕೋವಿಶೀಲ್ಡ್, ಶೇ 5ರಷ್ಟು ಕೋವಾಕ್ಸಿನ್ ಕೊಟ್ಟಿದ್ದೀವಿ. ಸದ್ಯಕ್ಕೆ 20 ಸಾವಿರ ವಾಕ್ಸಿನ್ ಜಿಲ್ಲೆಯಲ್ಲಿ ಇದೆ. ಎರಡನೇ ಡೋಸ್ ಪಡೆಯುವವರಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ ಎಂದರು.
ಹೆಚ್ಚು ದಿನದ ಹಾಸ್ಪಿಟಲ್‌ನಲ್ಲಿ ಇದ್ದರೆ ಬ್ಲಾಕ್ ಫಂಗಸ್ ಬರುತ್ತೆ. ಸ್ಟೀರಾಯ್ಡ್ ಔಷಧಿಗಳಿಂದ ಬ್ಲಾಕ್ ಫಂಗಸ್ ಬರುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ಸೂಚಿಸಿದ ಮಾತ್ರೆ ಮತ್ತು ಔಷಧಿಗಳನ್ನು ಮಾತ್ರ ಸೇವಿಸಿ ಎಂದು ಹೇಳಿದರು.