ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ದಸರಾಗೆ 3 ತಿಂಗಳು ಮಾತ್ರ ಬಾಕಿಯಿದ್ದು, ಈವರೆಗೆ ಯಾವುದೇ ಸಿದ್ಧತೆಗಳು ಆರಂಭವಾಗಿಲ್ಲ. ಈ ಪರಿಸ್ಥಿತಿ ನೋಡಿದರೆ ಈ ಬಾರಿ ನಾಡಹಬ್ಬ ದಸರಾ ಸರಳವಾಗಿ ನಡೆಯುವುದೇ ಎಂಬ ಅನುಮಾನ ಮೂಡಿದೆ.
ಮೈಸೂರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾವುಗಳ ಸಂಖ್ಯೆಯೂ ಏರುತ್ತಿದೆ. ಜೊತೆಗೆ ಕೊರೊನಾ ಸಮುದಾಯಕ್ಕೆ ಹರಡುವ ಭೀತಿ ಇರುವುದರಿಂದ ನಾಡಹಬ್ಬ ಅದ್ಧೂರಿಯಾಗಿ ನಡೆಯುವುದು ಅನುಮಾನವಾಗಿದ್ದು, ಸರಳ ಮತ್ತು ಸಾಂಪ್ರದಾಯಿಕವಾಗಿ ಮಾತ್ರ ನಡೆಯುತ್ತದೆ ಎಂಬ ಮಾತುಗಳು ಈಗಾಗಲೇ ಕೇಳಿ ಬರುತ್ತಿವೆ. ಮುಖ್ಯವಾಗಿ ವಿಶ್ವ ವಿಖ್ಯಾತ ದಸರಾ ಮಹೋತ್ಸವಕ್ಕೆ ದೇಶ ವಿದೇಶಗಳಿಂದ ಪ್ರವಾಸಿಗರನ್ನು ಸೆಳೆಯಲು 4 ತಿಂಗಳ ಮುಂಚೆಯೇ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಬೇಕಿತ್ತು. ಆದರೆ ಆ ಯಾವುದೇ ಸಿದ್ಧತೆಗಳು ಆರಂಭವಾಗಿಲ್ಲ. ಈ ಬಗ್ಗೆ ಸ್ವತಃ ಜಿಲ್ಲಾಧಿಕಾರಿಗಳೇ ಈ ಬಾರಿ ದಸರಾದ ಬಗ್ಗೆ ಪೂರ್ವ ಸಿದ್ಧತಾ ಸಭೆ ನಡೆದಿಲ್ಲ ಎಂದು ಹೇಳಿದ್ದರು.
ಗಜ ಪಯಣ ಡೌಟ್: ಪ್ರತಿ ವರ್ಷವೂ ದಸರಾದಲ್ಲಿ ಪಾಲ್ಗೊಳ್ಳುವ 15 ಆನೆಗಳನ್ನು 3 ತಿಂಗಳ ಮೊದಲೇ ವಿವಿಧ ಕಾಡಿನ ಶಿಬಿರಕ್ಕೆ ಹೋಗಿ ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳನ್ನು ಆಯ್ಕೆ ಮಾಡಬೇಕಿತ್ತು. ಆಗಸ್ಟ್ ತಿಂಗಳಿನಲ್ಲಿ ಗಜ ಪಯಣ ಮೂಲಕ ಈ ಆನೆಗಳನ್ನು ಮೈಸೂರು ಅರಮನೆಗೆ ಕರೆ ತರುವ ಗಜಪಯಣ ನಡೆಯಬೇಕಿತ್ತು. ಆದರೆ ಈ ಯಾವುದೇ ಕಾರ್ಯಗಳನ್ನು ನಡೆಸಲು ಸರ್ಕಾರದಿಂದ ನಿರ್ದೇಶನ ಇನ್ನೂ ಬಂದಿಲ್ಲ. ಆದ್ದರಿಂದ ಆನೆಗಳ ಆಯ್ಕೆ ಗಜಪಯಣ ಇವುಗಳ ಬಗ್ಗೆ ಇಲ್ಲಿಯವರೆಗೆ ಯಾವುದೇ ಪ್ರಕ್ರಿಯೆ ನಡೆಸಿಲ್ಲ ಎನ್ನುತ್ತಾರೆ ಡಿಸಿಎಫ್ ಅಲೆಕ್ಸಾಂಡರ್.