ಮೈಸೂರು:ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ ಜಿಲ್ಲೆಯ ನೂತನ ಎಂಟು ಶಾಸಕರಿಗೆ ಮೈಸೂರು ಜಿಲ್ಲಾ ಮತ್ತು ನಗರ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ಭವನದಲ್ಲಿ ಭಾನುವಾರ ಅಭಿನಂದಿಸಲಾಯಿತು.
ಇದಕ್ಕೂ ಮುನ್ನ ನಗರದ ಮೆಟ್ರಿಪಾಲ್ ವೃತ್ತದಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪುತ್ಥಳಿಗೆ ಹೂವಿನ ಹಾರ ಹಾಕಿ ಗೌರವ ನಮನ ಸಲ್ಲಿಸಲಾಯಿತು. ಬಳಿಕ ನಗರದ ಚಾಮರಾಜ ವಿಧಾನಸಭಾದ ಕ್ಷೇತ್ರದ ನೂತನ ಶಾಸಕ ಕೆ ಹರೀಶ್ ಗೌಡ ಮಾತನಾಡಿ, ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ 135 ಶಾಸಕರ ಗೆಲುವಿನ ಹಿಂದೆ ಪಕ್ಷದ ಕಾರ್ಯಕರ್ತರ ಕೊಡುಗೆ ಅಪಾರ. ನನಗೆ ಮೊದಲ ಬಾರಿಗೆ ಶಾಸಕಾಂಗ ಸ್ಥಾನ ಅಲಂಕರಿಸಲು ದುಡಿದ ಎಲ್ಲಾ ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಐದು ಬಾರಿ ಬಿಜೆಪಿ ಗೆದ್ದಿರುವ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್ ಕೋಟೆ ಮಾಡುವಲ್ಲಿ ಎಲ್ಲಾ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಶ್ರಮಿಸಿದ್ದಾರೆ. ಪ್ರತಿಯೊಬ್ಬರ ಮನೆ ಮನೆಗೆ ತೆರಳಿ ನನ್ನ ಪರವಾಗಿ ಮತಯಾಚಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಜನಸೇವೆ ಮಾಡುತ್ತೇನೆ :ಸಿದ್ದರಾಮಯ್ಯ ಅವರು ಮತ್ತೆ ರಾಜ್ಯದ ಮುಖ್ಯಮಂತ್ರಿ ಆಗಿರುವುದು ಮೈಸೂರು ಜಿಲ್ಲೆಗೆ ಹೆಮ್ಮೆಯ ಸಂಗತಿ. ಕಾಂಗ್ರೆಸ್ನ ಈ ಪ್ರಚಂಡ ಗೆಲುವು ಇನ್ನೂ ಇಪ್ಪತ್ತು ವರ್ಷಗಳ ಕಾಲ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರದಲ್ಲಿ ಇರುವುದನ್ನು ಸೂಚಿಸುತ್ತದೆ. ಈ ಗೆಲುವಿನ ಮೂಲಕ ಅತ್ಯಂತ ಪ್ರಾಮಾಣಿಕತೆ ಮತ್ತು ಇಚ್ಛಾಶಕ್ತಿಯಿಂದ ಕ್ಷೇತ್ರದಲ್ಲಿ ಜನಸೇವೆ ಮಾಡುತ್ತೇನೆ ಎಂದು ಹೇಳಿದರು.
ಮೊನ್ನೆ ನಡೆದ ಮೊದಲ ಸಿಎಲ್ಪಿ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಅವರು ಮಾತನಾಡುತ್ತ, ನಿಮ್ಮ ಗೆಲುವಿಗೆ ಆಚೆ ನಿಂತಿರುವ ಕಾರ್ಯಕರ್ತರು ಕಾರಣ. ಹಾಗಾಗಿ ಅವರಿಗೆ ನೀವು ಸಹಕಾರ ಕೊಟ್ಟರೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತಷ್ಟು ಸದೃಢವಾಗಿರುತ್ತದೆ ಎಂದು ಹೇಳಿದ್ದರು. ಸುರ್ಜೇವಾಲ ಅವರು ಹೇಳಿದ ಮಾತಿಗೆ ಅನುಗುಣವಾಗಿ ನಿಮ್ಮೊಂದಿಗೆ ಯಾವಾಗಲೂ ಆಭಾರಿಯಾಗಿರುತ್ತೇವೆ. ನಿಮ್ಮ ಯಾವುದೇ ಕೆಲಸಗಳನ್ನು ಕಾನೂನು ಮೂಲಕ ಮಾಡುವೆ ಎಂದು ಭರವಸೆ ನೀಡಿದರು.