ಕರ್ನಾಟಕ

karnataka

By ETV Bharat Karnataka Team

Published : Oct 8, 2023, 12:28 PM IST

Updated : Oct 8, 2023, 12:34 PM IST

ETV Bharat / state

ಅತ್ತಿಬೆಲೆ ಪಟಾಕಿ ದುರಂತ: ಮಾಲೀಕನ ವಿರುದ್ಧ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ

ಇಂದು ಅತ್ತಿಬೆಲೆ ಪಟಾಕಿ ದುರಂತ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ಈಗಾಗಲೇ ಗೋದಾಮು ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಲು ಅವರು ಸೂಚಿಸಿದ್ದಾರೆ.

attibele cracker blast spot
ಅತ್ತಿಬೆಲೆ ಪಟಾಕಿ ದುರಂತ: ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ- ಸಿಎಂ ಸಿದ್ದರಾಮಯ್ಯ

ಅತ್ತಿಬೆಲೆ ಪಟಾಕಿ ದುರಂತ: ಮಾಲೀಕನ ವಿರುದ್ಧ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ

ಮೈಸೂರು: ಅತ್ತಿಬೆಲೆ ಗಡಿಯ ಬಾಲಾಜಿ ಕ್ರ್ಯಾಕರ್ಸ್ ಪಟಾಕಿ ದಾಸ್ತಾನು ಮಳಿಗೆಯಲ್ಲಿ ಶನಿವಾರ ಸಂಭವಿಸಿದ ಬೆಂಕಿ ಅನಾಹುತದಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ. ಗೋದಾಮು ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಅಲ್ಲದೇ, ಅವರಿಂದು ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದು, ಸಂಪೂರ್ಣ ಮಾಹಿತಿ ಪಡೆಯಲಿದ್ದಾರೆ.

ಈ ಕುರಿತಂತೆ ಮೈಸೂರಿನ ತಮ್ಮ ನಿವಾಸದ ಬಳಿ ಜನತಾ ದರ್ಶನದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಸಿಎಂ, "ಪಟಾಕಿ ದುರಂತದಲ್ಲಿ ನನಗಿರುವ ಮಾಹಿತಿ ಪ್ರಕಾರ 14 ಮಂದಿ ಸಾವನ್ನಪ್ಪಿದ್ದಾರೆ. ಕಾರ್ಖಾನೆಯ ಮಾಲೀಕನ ಮೇಲೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ. ಘಟನಾ ಸ್ಥಳಕ್ಕೆ ಇಂದು ಭೇಟಿ ನೀಡುತ್ತಿದ್ದೇನೆ. ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತೇನೆ. ಆನಂತರ ಪಟಾಕಿ ಕಾರ್ಖಾನೆ ಹಾಗೂ ದಾಸ್ತಾನಿನ ಪರವಾನಗಿ ಪಡೆದಿದ್ದಾರೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದರು.

ಇದೇ ವೇಳೆ ಬರ ಅಧ್ಯಯನ ತಂಡದ ವಿರುದ್ಧ ರೈತರ ಅಸಮಾಧಾನ ಕುರಿತು ಪ್ರತಿಕ್ರಿಯಿಸಿದ ಅವರು "ಬರ ಅಧ್ಯಯನ ತಂಡದ ವಿರುದ್ಧ ರೈತರ ಆಕ್ರೋಶ ನನ್ನ ಗಮನಕ್ಕೆ ಬಂದಿಲ್ಲ. ಬರ ತಂಡದವರು ಸಮರ್ಪಕವಾಗಿ ಅಧ್ಯಯನ ಮಾಡಿ, ಸರಿಯಾದ ಮಾಹಿತಿಯನ್ನು ಕೇಂದ್ರಕ್ಕೆ ಕೊಡಬೇಕು. ಆಗ ಮಾತ್ರ ಸೂಕ್ತ ಪರಿಹಾರ ರಾಜ್ಯದ ರೈತರಿಗೆ ಸಿಗಲಿದೆ. ಬರ ತಂಡದ ವಿರುದ್ಧ ರೈತರ ಅಸಮಾಧಾನ ನನ್ನ ಗಮನಕ್ಕೆ ಬಂದಿಲ್ಲ" ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಅತ್ತಿಬೆಲೆ ಪಟಾಕಿ ದುರಂತ, 14ಕ್ಕೇರಿದ ಸಾವಿನ ಸಂಖ್ಯೆ: ಘಟನಾ ಸ್ಥಳಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಭೇಟಿ

ಇದೇ ವೇಳೆ, ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವೆ ನಡೆಯುತ್ತಿರುವ ಯುದ್ಧದ ಪ್ರದೇಶದಲ್ಲಿ ಕನ್ನಡಿಗರು ಸಿಲುಕಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು. ಇದೇ ಸಂದರ್ಭದಲ್ಲಿ ಅನಾರೋಗ್ಯದ ನಿಮಿತ್ತ ಮೈಸೂರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಂಸದ ಕೋಟೆ ಶಿವಣ್ಣ ಅವರ ಆರೋಗ್ಯ ವಿಚಾರಿಸಿ ಬೆಂಗಳೂರಿಗೆ ತೆರಳಿದರು.

ಸಿಎಂ ಸಂತಾಪ:ಅತ್ತಿಬೆಲೆಘಟನೆ ಸಂಬಂಧ ನಿನ್ನೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಸಿಎಂ, 'ಬೆಂಗಳೂರು ನಗರ ಜಿಲ್ಲೆ ಆನೇಕಲ್ ಸಮೀಪ ಅತ್ತಿಬೆಲೆಯ ಪಟಾಕಿ ಸಂಗ್ರಹ ಮಳಿಗೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 12 ಮಂದಿ ಮೃತಪಟ್ಟ ಸುದ್ದಿ ತಿಳಿದು ಅತೀವ ನೋವಾಯಿತು. ದುರ್ಘಟನೆ ನಡೆದ ಸ್ಥಳಕ್ಕೆ ನಾಳೆ ಭೇಟಿ ನೀಡಿ, ಪರಿಶೀಲನೆ ನಡೆಸಲಿದ್ದೇನೆ. ಮೃತ ಕಾರ್ಮಿಕರ ಕುಟುಂಬಕ್ಕೆ ನನ್ನ ಸಂತಾಪಗಳು' ಎಂದಿದ್ದಾರೆ.

ಮೃತರ ಕುಟುಂಬಗಳಿಗೆ ಪರಿಹಾರ ಘೋಷಣೆ:ನಿನ್ನೆ ರಾತ್ರಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​, ಬೆಂಕಿ ಅನಾಹುತದಲ್ಲಿ ಸಾವಿಗೀಡಾದ 12 ಜನರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದರು. ಜೊತೆಗೆ, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅವರು ಸಾವಿಗೀಡಾದ ಪ್ರತಿ ವ್ಯಕ್ತಿಯ ಕುಟುಂಬಸ್ಥರಿಗೆ ತಲಾ 3 ಲಕ್ಷ ರೂಪಾಯಿ, ಗಂಭೀರವಾಗಿ ಗಾಯಗೊಂಡವರಿಗೆ 1 ಲಕ್ಷ ಹಾಗು ಇತರೆ ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರವನ್ನು ಮುಖ್ಯಮಂತ್ರಿಗಳ ಸಾಮಾನ್ಯ ಪರಿಹಾರ ನಿಧಿಯಿಂದ ಪ್ರಕಟಿಸಿದ್ದರು.

ಇದನ್ನೂ ಓದಿ:ಅತ್ತಿಬೆಲೆ ಪಟಾಕಿ ದುರಂತ: ಮೃತರ ಗುರುತು ಪತ್ತೆ, ಒಂದೇ ಗ್ರಾಮದ 8 ವಿದ್ಯಾರ್ಥಿಗಳು ಸಾವು!

Last Updated : Oct 8, 2023, 12:34 PM IST

ABOUT THE AUTHOR

...view details