ಮೈಸೂರು :ನನ್ನ ಇಡೀ ರಾಜಕಾರಣ ಕೋಮುವಾದಿ ಪಕ್ಷಗಳ ವಿರುದ್ಧವೇ ನಡೆದಿದೆ. ಹೀಗಿರುವಾಗ ನಾನು ಬಿಜೆಪಿಗೆ ಹೋಗುತ್ತೇನೆಂದರೆ ಯಾರಾದರೂ ನಂಬುತ್ತಾರೆಯೇ?. ಅದು ನಂಬುವ ಮಾತೇ? ನಾನು ಬಿಜೆಪಿಗೆ ಸೇರಲು ಹೋಗಿದ್ದೆ ಎಂಬ ಕುಮಾರಸ್ವಾಮಿ ಹೇಳಿಕೆ ನಗೆಪಾಟಲಿನದು. ನನ್ನ ಹೆಣವೂ ಬಿಜೆಪಿಗೆ ಹೋಗುವುದಿಲ್ಲ ಎಂದು ಮೈಸೂರಿನ ವಿಮಾನ ನಿಲ್ದಾಣದಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನ ಆದಿಚುಂಚನಗಿರಿ ಶಾಖಾಮಠದ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡುತ್ತಾ, ನಾನು ಬಿಜೆಪಿ ಸೇರಲು ಹೋಗಿದ್ದೆ ಎಂಬ ಕುಮಾರಸ್ವಾಮಿ ಹೇಳಿಕೆ ನಗೆಪಾಟಲಿನದು. ನನ್ನ ಹೆಣವೂ ಸಹ ಬಿಜೆಪಿಗೆ ಹೋಗದು. ನಾನು ಯಾವುದೇ ಬೇರೆ ಪಕ್ಷದ ನಾಯಕರನ್ನು ಭೇಟಿ ಮಾಡಿದರೇ, ಅದಕ್ಕೆ ಆ ಪಕ್ಷವನ್ನು ಸೇರುತ್ತೇನೆ ಎಂದು ಹೇಳುವುದು ಸರಿಯಲ್ಲ ಎಂದರು.
ಕಾವೇರಿ ನೀರು ಬಿಡುಗಡೆ ವಿಚಾರ: ಪ್ರಾಧಿಕಾರದ ಆದೇಶ ಇರುವ ಕಾರಣ ಅನಿವಾರ್ಯವಾಗಿ ನೀರು ಬಿಡುತ್ತಿದ್ದೇವೆ. ಖುಷಿಯಿಂದ ನೀರು ಬಿಡುತ್ತಿಲ್ಲ. ತಮಿಳುನಾಡು ವಿನಾಃ ಕಾರಣ ಕ್ಯಾತೆ ತೆಗೆಯುತ್ತಿದೆ. 21 ನೇ ತಾರೀಖಿನಂದು ಮತ್ತೆ ಕೋರ್ಟಿನಲ್ಲಿ ನಮ್ಮ ಕಷ್ಟವನ್ನು ವಿವರಿಸುತ್ತೇವೆ. ಬಿಜೆಪಿಯವರು ಇದರಲ್ಲಿ ರಾಜಕಾರಣ ಮಾಡುವುದಿಲ್ಲ ಎಂದು ಹೇಳಲಿ. ಈಗ ಮತ್ತೆ ಕಾವೇರಿ ವಿಚಾರದಲ್ಲಿ ರಾಜಕಾರಣ ಮಾಡಲು ಹೊರಟಿದ್ದಾರೆ. ಪ್ರಧಾನಿ ಬಳಿ ನಿಯೋಗ ಹೋಗಲು ತಯಾರಿದ್ದೆವು. ಆದರೆ ಪ್ರಧಾನಿ ಭೇಟಿಗೆ ದಿನಾಂಕವೇ ಸಿಗುತ್ತಿಲ್ಲ. ಬಿಜೆಪಿಯವರಿಗೆ ಹೇಳಿದರೆ ಅವರು ಕೇಳುವ ಸ್ಥಿತಿಯಲ್ಲಿಲ್ಲ. ಇಲ್ಲೇ ಕುಳಿತು ಕಥೆ ಹೇಳುತ್ತಿದ್ದಾರೆ. ನಾವು ರೈತರ ರಕ್ಷಣೆಗೆ ಈಗಲೂ ಬದ್ದ ಎಂದು ಸಿಎಂ ತಿಳಿಸಿದರು.
ಮುಂದಿನ ಕ್ಯಾಬಿನೆಟ್ನಲ್ಲಿ ಬರ ಘೋಷಣೆ: ರಾಜ್ಯದಲ್ಲಿ ಮಳೆ ಇಲ್ಲದೆ ಕೆಲವು ತಾಲ್ಲೂಕುಗಳಲ್ಲಿ ಬರ ಬಂದಿದ್ದು, ಸದ್ಯಕ್ಕೆ 61 ತಾಲ್ಲೂಕುಗಳನ್ನು ಬರದ ತಾಲ್ಲೂಕುಗಳೆಂದು ಪಟ್ಟಿ ಮಾಡಿದ್ದೇವೆ. ಇನ್ನೂ 136 ತಾಲ್ಲೂಕುಗಳಲ್ಲಿ ಬರ ಅಧ್ಯಯನ ನಡೆಯುತ್ತಿದೆ. ಅದರ ವರದಿ ಸೇರಿಸಿ, ಮುಂದಿನ ಕ್ಯಾಬಿನೆಟ್ನಲ್ಲಿ ಬರ ಘೋಷಣೆ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು ಬಂದ್ ಬಗ್ಗೆ- 'ವಾಸ್ತವಕ್ಕೆ ದೂರವಾದ ಬೇಡಿಕೆಗಳು':ಇಂದು ಬೆಂಗಳೂರು ಬಂದ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಅವರು ವಾಸ್ತವಕ್ಕೆ ದೂರವಾದ ಬೇಡಿಕೆಗಳನ್ನು ಮುಂದಿಡುತ್ತಿದ್ದಾರೆ. ಮಹಿಳೆಯರಿಗೆ ಅನುಕೂಲ ಮಾಡಿಕೊಡಲು ಶಕ್ತಿ ಯೋಜನೆಯನ್ನು ರೂಪಿಸಿದ್ದೇವೆ. ಆದರೆ ಖಾಸಗಿ ಬಸ್ನವರು ಶಕ್ತಿ ಯೋಜನೆಯಿಂದ ನಮಗೆ ನಷ್ಟವಾಗುತ್ತಿದೆ. ನಮಗೂ ಸಹ ಹಣ ಕೊಡಿ ಎಂದು ಕೇಳುತ್ತಿದ್ದಾರೆ. ಅದು ಸಾಧ್ಯವೇ ಎಂದು ಪ್ರಶ್ನೆ ಮಾಡಿದ ಸಿದ್ದರಾಮಯ್ಯ, ಬಂದ್ ಮಾಡುವುದು, ಪ್ರತಿಭಟನೆ ಮಾಡುವುದು ಪ್ರಜಾಪ್ರಭುತ್ವದ ಜೀವಾಳ. ಬಂದ್ ಹತ್ತಿಕ್ಕಲು ಅವಕಾಶವೇ ಇಲ್ಲ. ಕಾನೂನಿಗೆ ತೊಂದರೆ ಆಗದ ರೀತಿಯಲ್ಲಿ ಬಂದ್ ಮಾಡಲಿ. ಅವರ ಬೇಡಿಕೆ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಗಮನ ಹರಿಸುತ್ತಾರೆ ಎಂದರು.
'ಒಂದು ದೇಶ, ಒಂದು ಚುನಾವಣೆ ಅಸಾಧ್ಯ': ಒಂದು ದೇಶ, ಒಂದು ಚುನಾವಣೆ ಈ ಯೋಜನೆಯ ಅವೈಜ್ಞಾನಿಕವಾದುದು. ಒಂದು ಚುನಾವಣೆ ನಡೆಸಲು ಹೇಗೆ ಸಾಧ್ಯ?. ಇದೊಂದು ಅಸಾಧ್ಯದ ಮಾತು. ಕೆಲವು ರಾಜ್ಯಗಳಲ್ಲಿ ರಾಜ್ಯಪಾಲರ ಆಡಳಿತವಿರುತ್ತದೆ. ಕೆಲವು ಕಡೆ ಅರ್ಧ ಸರ್ಕಾರ ನಡೆಯುತ್ತಿರುತ್ತದೆ. ಕರ್ನಾಟಕದ ಚುನಾವಣಾ ಫಲಿತಾಂಶದಿಂದ ಕೇಂದ್ರದ ಬಿಜೆಪಿ ನಾಯಕರು ದೃತಿಗೆಟ್ಟಿದ್ದಾರೆ. ಮೋದಿ ಬಂದು ಪ್ರಚಾರ ಮಾಡಿದ ಕಡೆ ಕಾಂಗ್ರೆಸ್ 135 ಸ್ಥಾನ ಗೆದ್ದಿದೆ. ಇದೇ ಒತ್ತಡದಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಎಂದು ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಇದನ್ನೂ ಓದಿ:Dengue fever : ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ .. ಭಯ ಬೇಡ, ಜಾಗ್ರತೆಯಿರಲಿ ಎಂದ ಸಿಎಂ ಸಿದ್ದರಾಮಯ್ಯ