ಮೈಸೂರು: ದೇವಸ್ಥಾನದಲ್ಲಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ ಭಿಕ್ಷುಕಿಯ ಹೆಣ್ಣು ಮಗುವನ್ನು ಅಪಹರಣ ಮಾಡಿರುವ ಘಟನೆ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದಲ್ಲಿ ನಡೆದಿದೆ.
ಅಪಹರಣವಾದ ಹೆಣ್ಣು ಮಗು ಕವಿತಾ (3). ಪಾರ್ವತಿ ಎಂಬುವವರು ಮಗುವಿನ ತಾಯಿ. ಈಕೆ ಮೂಲತಃ ಕೆ.ಆರ್. ನಗರ ತಾಲೂಕಿನವರಾಗಿದ್ದು, ಹೊಟ್ಟೆಪಾಡಿಗಾಗಿ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ ಬಳಿ ಭಿಕ್ಷೆ ಬೇಡಿ ಮಗುವನ್ನು ಸಾಕುತ್ತಿದ್ದಳು.
3 ವರ್ಷದ ಹೆಣ್ಣು ಮಗುವಿನ ಅಪಹರಣ ಘಟನೆ: ಮಧ್ಯಾಹ್ನದ ವೇಳೆ ಟೀ ಮಾರುವ ಅಪರಿಚಿತ ವ್ಯಕ್ತಿಯೊಬ್ಬ ಆ ಹೆಣ್ಣು ಮಗುವಿನ ಕೈಗೆ 10 ರೂಪಾಯಿ ನೀಡಿ, ತಾಯಿ ಪಾರ್ವತಿಯ ಬಳಿ ನಿನ್ನ ಮಗುವನ್ನು ಕೊಡು. ಒಬ್ಬ ವ್ಯಕ್ತಿಗೆ ಮಕ್ಕಳಿಲ್ಲ. ಹಾಗಾಗಿ ನಿನ್ನ ಮಗು ಕೊಡು, ಅವರು ಸಾಕುತ್ತಾರೆ ಎಂದು ಕೇಳಿದ್ದಾನೆ. ಮಗು ಕೇಳಿದ ಅರ್ಧ ಗಂಟೆಯಲ್ಲೇ ಟೀ ಮಾರುವ ವ್ಯಕ್ತಿ ಮತ್ತು ಮಗು ನಾಪತ್ತೆಯಾಗಿದ್ದು, ತಕ್ಷಣ ತಾಯಿ ಪಾರ್ವತಿ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಪೊಲೀಸರು ದೇವಾಲಯದ ಬಳಿ ಅನುಮಾನಾಸ್ಪವಾಗಿ ಓಡಾಡುವ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ. ಈ ಹಿಂದೆ ಪಾರ್ವತಿಯ ಗಂಡು ಮಗುವನ್ನು ಸಹ ಅಪಹರಿಸಿದ್ದರು. ಇದೀಗ 3 ವರ್ಷದ ಹೆಣ್ಣು ಮಗುವನ್ನು ಸಹ ಅಪಹರಿಸಿದ್ದಾರೆ. ಈ ಕುರಿತು ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.