ಮೈಸೂರು:ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ವಿರೋಧಿಸಿ ರೈತ ಸಂಘ ಹಾಗೂ ವಿವಿಧ ಸಂಘಟನೆಗಳು ಮೈಸೂರು ಜಿಲ್ಲೆಯಾದ್ಯಂತ ಪ್ರತಿಭಟನೆ, ಬಂದ್ ನಡೆಸುತ್ತಿದ್ದಾರೆ. ತಮಿಳು ನಾಡಿಗೆ ಪ್ರತಿನಿತ್ಯ 5000 ಕ್ಯೂಸೆಕ್ ಕಾವೇರಿ ನೀರನ್ನು ಹರಿಸುತ್ತಿರುವುದರಿಂದ ರೈತಾಪಿ ಕೃಷಿ ವರ್ಗಕ್ಕೆ, ಕುಡಿಯುವ ನೀರಿಗೆ ಆಗುತ್ತಿರುವ ಅನ್ಯಾಯ ಹಾಗೂ ತಮಿಳುನಾಡಿನ ಧೋರಣೆಯನ್ನು ಖಂಡಿಸಿ ಮೈಸೂರು ಬ್ರಾಹ್ಮಣ ಸಂಘದ ನೇತೃತ್ವದಲ್ಲಿಂದು ವಿಪ್ರ ಸಮುದಾಯದವರು ಶಂಖ, ಜಾಗಟೆ, ಘಂಟೆ ಬಾರಿಸಿ ಸಾಮೂಹಿಕ ಭಜನೆ ಮಾಡುವ ಮೂಲಕ ಜಿಲ್ಲಾ ಪಂಚಾಯಿತಿ ಎದುರುಗಡೆ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಮೈಸೂರು ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್ ಮಾತನಾಡಿ, ಕನ್ನಡ ನೆಲ, ಜಲ, ಭಾಷೆ ವಿಚಾರವಾಗಿ ಧಕ್ಕೆ ಬಂದಾಗ ಪ್ರತಿಭಟಿಸುವುದು ನ್ಯಾಯ ಕೇಳುವುದು ಪ್ರತಿಯೊಬ್ಬ ಕನ್ನಡಿಗನ ಹಕ್ಕು. ಸುಪ್ರಿಂಕೋರ್ಟ್ ತೀರ್ಪಿಗೆ ತಲೆಬಾಗಬೇಕು ನಿಜ ಆದರೆ ವಾಸ್ತವತೆ, ವೈಜ್ಞಾನಿಕತೆ ವಿಷಯವನ್ನು ತಿಳಿಸುವುದು ನಮ್ಮ ಕರ್ನಾಟಕದ ಜನಪ್ರತಿನಿಧಿಗಳ ಕರ್ತವ್ಯ. ಈ ಹಿಂದೆಯೂ ಕೂಡ ಕರ್ನಾಟಕಕ್ಕೆ ತಮಿಳುನಾಡು ಸರ್ಕಾರ ನೀರಿಗಾಗಿ ಖ್ಯಾತೆ ತೆಗೆದಾಗ ಅಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಮತ್ತು ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ರವರ ನೇತೃತ್ವದಲ್ಲಿ ಕರ್ನಾಟಕದ ಸಮಸ್ತ ಜನಪ್ರತಿನಿಧಿಗಳ ನಿಯೋಗ ರಾಷ್ಟ್ರಪತಿ ರಾಜ್ಯಪಲರ ಬಳಿ ಕರ್ನಾಟಕದ ಸಮಸ್ಯೆಯನ್ನು ತಿಳಿಸಿ ನ್ಯಾಯ ಕೊಡಿಸಿದ್ದರು. ಇಂದು ಅಂತಹ ಆರೊಗ್ಯಕರ ಸಮನ್ವಯ ಕಾಣದಿರುವುದು ಬೇಸರದ ಸಂಗತಿ. ಮತ್ತೊಮ್ಮೆ ನ್ಯಾಯಾಲಯ ಕಾವೇರಿ ತೀರ್ಪನ್ನು ಪರಿಶೀಲಿಸಿ 5000 ಕ್ಯೂಸೆಕ್ ಹೊರಹರಿವು ಚರ್ಚಿಸಿ ಕನ್ನಡಿಗರಿಗೆ ನ್ಯಾಯ ದೊರಕಿಸಬೇಕು ಎಂದು ಆಗ್ರಹಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷ ನಂ. ಶ್ರೀಕಂಠಕುಮಾರ್ ಮಾತನಾಡಿ, ಮೇಕೆದಾಟು ಯೋಜನೆ ಜಾರಿಗೆ ತರುತ್ತೇವೆ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಅದನ್ನು ಕಾರ್ಯರೂಪಕ್ಕೆ ತರಲು ಮುಂದಾಗಬೇಕು. ಇದರಿಂದ ರೈತಾಪಿ ವರ್ಗಕ್ಕೆ ಮತ್ತು ಕುಡಿಯುವ ನೀರಿಗೆ ಸಹಕಾರವಾಗುತ್ತದೆ ಎಂದರು.