ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಗೆ ಗಜಪಡೆ ಸನ್ನದ್ದವಾಗಿದ್ದು, ಗುರುವಾರ ಸಿಡಿಮದ್ದು ತಾಲೀಮು ನಡೆಸಲಾಯಿತು. ಅಂಬಾರಿ ಹೊರುವ ಕ್ಯಾಪ್ಟನ್ ಅಭಿಮನ್ಯು ಸಿಡಿಮದ್ದು ಶಬ್ದಕ್ಕೆ ಕೊಂಚವೂ ಅಲುಗಾಡದೆ ಗಾಂಭೀರ್ಯ ತೋರಿದ್ದಾನೆ.
ಸಾಂಸ್ಕೃತಿಕ ನಗರಿ ಮೈಸೂರು ಸರಳ ಹಾಗೂ ಸಾಂಪ್ರದಾಯಿಕ ದಸರಾ ಆಚರಣೆಗೆ ಸಜ್ಜಾಗುತ್ತಿದೆ. ಜಂಬೂ ಸವಾರಿಗಾಗಿ ಗಜಪಡೆಯೂ ರೆಡಿ ಆಗುತ್ತಿವೆ. ಈಗಾಗಲೇ ಕಾಲ್ನಡಿಗೆ, ಭಾರ ಹೊರುವ ತಾಲೀಮು ನಡೆಸಿ ಸೈ ಎನಿಸಿಕೊಂಡಿರುವ ಗಜಪಡೆ, ಈಗ ಮೊದಲ ಹಂತದ ಕುಶಾಲತೋಪು ತಾಲೀಮನ್ನು ಅರಮನೆ ಕೋಟೆ ಮಾರಮ್ಮ ದೇವಸ್ಥಾನ ಬಳಿಯ ಪಾರ್ಕಿಂಗ್ ಜಾಗದಲ್ಲಿ ಯಶಸ್ವಿಯಾಗಿ ಮುಗಿಸಿವೆ.
7 ಫಿರಂಗಿ ಗಾಡಿಗಳನ್ನು ಮೂರು ಸುತ್ತಿನಲ್ಲಿ 21 ಸಿಡಿಮದ್ದು ಸಿಡಿಸಿ ಗಜಪಡೆ ಹಾಗೂ ಅಶ್ವಾರೋಹಿ ಪಡೆಯನ್ನು ಸನ್ನದ್ಧಗೊಳಿಸಲಾಯಿತು. ಸಿಡಿಮದ್ದಿನ ದೊಡ್ಡ ಶಬ್ದಕ್ಕೆ ಕ್ಯಾಪ್ಟನ್ ಅಭಿಮನ್ಯು ಕೊಂಚವೂ ಅಲುಗಾಡದೆ ಗಾಂಭೀರ್ಯತೆ ತೋರಿದರೆ, ಧನಂಜಯ, ಹೊಸದಾಗಿ ಬಂದಿರುವ ಅಶ್ವತ್ಥಾಮ ಹಾಗೂ ಲಕ್ಷ್ಮೀ ಆನೆಗಳು ಬೆದರಿ ಘರ್ಜಿಸಿದವು.
ಸಿಡಿಮದ್ದು ತಾಲೀಮುನಲ್ಲಿ ಪಾಲ್ಗೊಂಡು ಅಶ್ವಾರೋಹಿ ಪಡೆ ಸಿದ್ಧತೆಯನ್ನು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ವೀಕ್ಷಣೆ ಮಾಡಿದರು. ನಗರ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು.