ಮೈಸೂರು: ಸಂಸತ್ ಭದ್ರತಾ ಲೋಪ ಪ್ರಕರಣವು ತನಿಖೆಯ ಹಂತದಲ್ಲಿರುವಾಗಲೇ ಅನಗತ್ಯ ಹೇಳಿಕೆಗಳನ್ನು ನೀಡುವ ಮೂಲಕ ಬಿಜೆಪಿಯವರು ತನಿಖೆಯ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ದೂರಿದರು. ನಗರ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಸತ್‌ನಲ್ಲಿ ಇತ್ತೀಚೆಗೆ ನಡೆದ ಅಹಿತಕರ ಘಟನೆಯ ಕುರಿತು ಲೆಹರ್ ಸಿಂಗ್ ನೀಡಿರುವ ಹೇಳಿಕೆ ಬೇಜವಾಬ್ದಾರಿಯಿಂದ ಕೂಡಿದೆ. ಪ್ರಕರಣವು ತನಿಖೆಯ ಹಂತದಲ್ಲಿರುವಾಗಲೇ ಬಿಜೆಪಿ ನಾಯಕರು ಅನಗತ್ಯ ಹೇಳಿಕೆಗಳನ್ನು ನೀಡುವ ಮೂಲಕ ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.
ಸಂಸದ ಪ್ರತಾಪ್ ಸಿಂಹ ಅವರನ್ನು ಭಯೋತ್ಪಾದಕನಂತೆ ಬಿಂಬಿಸಿ ನಡೆಸಲಾದ ಪ್ರತಿಭಟನೆಯ ಕುರಿತು ಮಾತನಾಡಿದ ಲಕ್ಷ್ಮಣ್, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ನಡೆಸಿದ ಪ್ರತಿಭಟನೆಗೂ, ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಪ್ರತಾಪ್ ಸಿಂಹ ಮುಸ್ಲಿಂ ವೇಷಧಾರಿಯಾಗಿರುವಂತೆ ಮಾಡಿ ಕೈಯಲ್ಲಿ ಬಾಂಬ್ ಹಿಡಿದಿರುವಂತೆ ಬಿಂಬಿಸಿ ಪ್ರತಿಭಟನೆ ಮಾಡಿದ್ದಾರೆ.
ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಶಿವರಾಮ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಪ್ರತಿಭಟನೆ ನಡೆಸಿದ ಶಿವರಾಮ್ ಹಾಗೂ ಕಾಂಗ್ರೆಸ್‌ಗೂ ಯಾವ ಸಂಬಂಧವೂ ಇಲ್ಲ. ಶಿವರಾಮ್ ಕಾಂಗ್ರೆಸ್ ಕಾರ್ಯಕರ್ತರಲ್ಲ, ಕೇವಲ ಸಿಎಂ ಸಿದ್ದರಾಮಯ್ಯ ಬಂದಾಗ ಹಿಂದೆ, ಮುಂದೆ ನಿಂತಿರುತ್ತಾರೆ ಅಷ್ಟೇ. ಸಂಸದ ಪ್ರತಾಪ್ ಸಿಂಹ ಅವರನ್ನು ಭಯೋತ್ಪಾದಕ ಎಂದು ಕಾಂಗ್ರೆಸ್ ಎಂದೂ ಹೇಳಿಲ್ಲ, ಪ್ರತಾಪ್ ಸಿಂಹ ಗೌರವಾನ್ವಿತ ಸಂಸತ್ ಸದಸ್ಯರು ಎಂದರು.