ಮೈಸೂರು:ಮಹಿಷಾ ದಸರಾ ಆಚರಣೆ ತಡೆಯಲು ಸಂಸದ ಪ್ರತಾಪಸಿಂಹರಿಗೆ ಬಿಜೆಪಿ ಕಾರ್ಯಕರ್ತರು ಬೆಂಬಲ ಕೊಟ್ಟಿದ್ದಾರಾ? ನಿಮ್ಮ ವೈಯಕ್ತಿಕ ಹಿತಶಕ್ತಿಗೆ ಪಕ್ಷ ಹಾಗೂ ಕಾರ್ಯಕರ್ತರನ್ನು ಬಲಿ ಕೊಡಬೇಡಿ ಎಂದು ಬಿಜೆಪಿ ಮುಖಂಡ ವಿ.ಗಿರಿಧರ್ ಅವರು ಸ್ವಪಕ್ಷೀಯ ಸಂಸದರ ವಿರುದ್ದ ಕಿಡಿಕಾರಿದ್ದಾರೆ.
ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಷ ದಸರಾಕ್ಕೆ ಸಂಸದ ಪ್ರತಾಪಸಿಂಹ ಅವರೇ ಮಾತ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಪಕ್ಷಕ್ಕೂ ಅದಕ್ಕೂ ಸಂಬಂಧವಿಲ್ಲ. ಕೋಮು ಸೌಹಾರ್ದತೆ ಹಾಳು ಮಾಡುವ ಹೇಳಿಕೆ ನೀಡುತ್ತಿದ್ದ ಸಂಸದ ಈಗ ಮಹಿಷ ದಸರಾ ಹೆಸರಿನಲ್ಲಿ ಒಂದು ಸಮುದಾಯದ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಮತ್ತೊಬ್ಬರ ಸ್ವಾತಂತ್ರ್ಯಕ್ಕೆ ಧಕ್ಕೆ ಬರುವ ರೀತಿಯಲ್ಲಿ ಅವರು ಮಹಿಷ ದಸರಾ ಕುರಿತಂತೆ ನಡೆದುಕೊಳ್ಳುತ್ತಿದ್ದಾರೆ. ಈ ಹಿಂದೆಯೂ ಇವರ ದುರಹಂಕಾರದ ವರ್ತನೆಗೆ ಸಾರ್ವಜನಿಕರು ಆಕ್ಷೇಪಿಸಿದ್ದರು. ಈ ಹಿಂದೆ ದಲಿತರ ಮೇಲೆ ದೌರ್ಜನ್ಯ ನಡೆದಾಗ ಇವರು ಮಾತನಾಡಿರಲಿಲ್ಲ. ಒಕ್ಕಲಿಗ ಸಮುದಾಯ ಹಾಗೂ ಮುಸ್ಲಿಮರ ವಿರುದ್ಧ ವೈಷಮ್ಯ ಬಿತ್ತುವ ಯತ್ನವಾಗಿ ಈತ ಟಿಪ್ಪುವನ್ನು ಒಕ್ಕಲಿಗ ಸಮುದಾಯದ ಉರಿಗೌಡ ಹಾಗೂ ನಂಜೇಗೌಡ ಕೊಂದಿದ್ದರು ಎಂದು ಕಟ್ಟುಕಥೆ ಕಟ್ಟಿದ್ದರು ಎಂದು ದೂರಿದರು.
ಚಾಮುಂಡಿ ಬೆಟ್ಟಕ್ಕೆ ಶಾಸಕ ತನ್ವೀರ್‌ಸೇಠ್, ಮುಸ್ಲಿಮರೂ ಭೇಟಿ ನೀಡುತ್ತಾರೆ ಎನ್ನುತ್ತಾರೆ. ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಒಡೆದಾಳುವ ಮನಸ್ಥಿತಿಯನ್ನು ಬಿತ್ತಬೇಡಿ, ಜನರು ಕೂಡ ಜಾಗೃತರಾಗಿದ್ದಾರೆ. ನಿಮ್ಮ ನಡವಳಿಕೆಯನ್ನು ಗಮನಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಮಹಿಷ ದಸರಾಕ್ಕೆ ತಮ್ಮ ಬೆಂಬಲ ಇದ್ದು, ಪೊಲೀಸರು ಅದಕ್ಕೆ ಅನುಮತಿ ನೀಡಬೇಕು. ಇನ್ನು, ಒಂದು ವೇಳೆ ಮುಂದಿನ ಚುನಾವಣೆಯಲ್ಲಿ ಪ್ರತಾಪಸಿಂಹ ಅವರಿಗೆ ಬಿಜೆಪಿ ಟಿಕೆಟ್ ನೀಡಿದಲ್ಲಿ, ಪ್ರತಾಪಸಿಂಹ ಹಠಾವೋ, ಮೈಸೂರು ಬಚಾವೊ ಎಂಬ ಚಳವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇನ್ನೂ ಕೆಲವೇ ಕೆಲವು ತಿಂಗಳಿನಲ್ಲಿ ಲೋಕಸಭಾ ಚುನಾವಣೆ ಎದುರಾಗುವುದರಿಂದ, ಇಂತಹ ಪರಿಸ್ಥಿತಿ ದುರ್ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ಹೀಗಿದ್ದರೂ ಅದೇ ಅವರ ಕೊನೆ ಚುನಾವಣೆ ಆಗಲಿದ್ದು, ಸೋತು ಸಕಲೇಶಪುರಕ್ಕೆ ಗಂಟು ಮೂಟೆ ಕಟ್ಟಿಕೊಂಡು ಹೋಗಲಿದ್ದಾರೆ. ಇಲ್ಲವೇ ಈಗಾಗಲೇ ಸಾಕಷ್ಟು ಹಣ ಮಾಡಿರುವ ಕಾರಣ ಬೆಂಗಳೂರಿಗೆ ಹೋಗಿ ಯಾವುದಾದರೊಂದು ಚಾನೆಲ್ ಆರಂಭಿಸಲಿದ್ದಾರೆ ಎಂದು ಕಿಡಿಕಾರಿದರು.
ಸಂಸದ ಪ್ರತಾಪಸಿಂಹ ಅವರು ಮಹಿಷಾ ದಸರಾ ಆಚರಣೆ ತಡೆಯಲು ಹಾಗೂ ಇನ್ನಿತರ ಧೋರಣೆ ವಿರುದ್ಧ ನಗರ ಹಾಗೂ ಜಿಲ್ಲಾ ಬಿಜೆಪಿಯೊಳಗೆ ಅಸಮಾಧಾನ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಹಿರಿಯ ಬಿಜೆಪಿ ಮುಖಂಡರು ಸಂಸದ ವಿರುದ್ಧ ಕಿಡಿಕಾರುತ್ತಿದ್ದಾರೆ.
ಇದನ್ನೂ ಓದಿ:ಮೈಸೂರು ದಸರಾ: 7 ದಿನಗಳ ಕಾಲ ಕುಸ್ತಿ ಪಂದ್ಯ ಆಯೋಜನೆ