ಮೈಸೂರು :ವರುಣಾ ಕ್ಷೇತ್ರದಲ್ಲಿ ಲಿಂಗಾಯತ ಗೌಡ ಸಮಾಜ ಅಧಿಕ ಸಂಖ್ಯೆಯಲ್ಲಿದೆ. ಜನಸಂಖ್ಯಾನುಗುಣವಾಗಿ ಈ ಸಮುದಾಯಕ್ಕೆ 2023ರ ಚುನಾವಣೆಯಲ್ಲಿ ಅವಕಾಶ ನೀಡಬೇಕೆಂದು ಕೂಡಲ ಸಂಗಮ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಬಿ ವೈ ವಿಜಯೇಂದ್ರ ಅವರು ಎಲ್ಲಿಯಾದರೂ ನಿಲ್ಲಲಿ. ಆದರೆ, ವರುಣಾ ಕ್ಷೇತ್ರದಲ್ಲಿ ಲಿಂಗಾಯತ ಗೌಡ ಸಮುದಾಯಕ್ಕೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು.
2023ರ ಚುನಾವಣೆಯಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು. ನಮ್ಮ ಮುಖಂಡರನ್ನು ಅಧಿಕಾರ ಸ್ಥಾನದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಎರಡು ರಾಜಕೀಯ ಪಕ್ಷಗಳು ಆ ಕೆಲಸಕ್ಕೆ ಮುಂದಾಗಬೇಕು. ಮೈಸೂರು- ಚಾಮರಾಜನಗರ ಜಿಲ್ಲೆಯಲ್ಲಿ 6 ಸಾಮಾನ್ಯ ಕ್ಷೇತ್ರವಿದೆ. ಇಲ್ಲಿ ಲಿಂಗಾಯತಗೌಡ, ಪಂಚಮಸಾಲಿಗಳಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ದಕ್ಷಿಣ ಕರ್ನಾಟಕದಲ್ಲಿ ಪಂಚಮಸಾಲಿ ಲಿಂಗಾಯತರಿಗೆ ಸೂಕ್ತ ರಾಜಕೀಯ ಮತ್ತು ಸಾಮಾಜಿಕ ಸ್ಥಾನಮಾನ ಲಭ್ಯವಾಗಿಲ್ಲ. ಪಂಚಮಸಾಲಿ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಲಭ್ಯವಾಗಿಲ್ಲ. ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಸಮುದಾಯವು ಹಿನ್ನಡೆ ಅನುಭವಿಸುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ನಮ್ಮ ಸಮುದಾಯಕ್ಕೆ ರಾಜಕೀಯ ಸ್ಥಾನಮಾನ ಲಭ್ಯವಾಗಿದೆ.
ಆದರೆ, ದಕ್ಷಿಣ ಕರ್ನಾಟಕದಲ್ಲಿ ಸಾಕಷ್ಟು ಕಡೆಗಣಿಸಲ್ಪಟ್ಟಿದ್ದು, ಸಮುದಾಯವನ್ನು ಸಂಘಟಿಸಬೇಕಿದೆ. ಈ ಹಿನ್ನೆಲೆ ಮೀಸಲಾತಿ ನೀಡುವುದಾಗಿ ಸರ್ಕಾರ ಭರವಸೆ ನೀಡಿದ್ದರೂ ಸಮುದಾಯ ಸಂಘಟನೆಗಾಗಿ ಪ್ರತಿಜ್ಞಾ ಪಂಚಾಯತ್ ಬೃಹತ್ ರಾಜ್ಯ ಅಭಿಯಾನ ನಡೆಸುತ್ತಿದ್ದೇವೆ ಎಂದು ತಿಳಿಸಿದರು.