ಮೈಸೂರು :ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಮಾಜಿ ಸಚಿವ ಅಶ್ವತ್ಥ ನಾರಾಯಣ್ ನೀಡಿದ ಹೇಳಿಕೆ ಕುರಿತು ಮೈಸೂರಿನಲ್ಲಿ ಎಫ್ಐಆರ್ ದಾಖಲಾಗಿದೆ. ಈ ಪ್ರಕರಣವನ್ನು ಮಂಡ್ಯಗೆ ವರ್ಗಾಯಿಸಲಾಗಿದ್ದು. ಅಶ್ವತ್ಥ ನಾರಾಯಣ್ ಅವರನ್ನು ಕೂಡಲೇ 24 ಗಂಟೆಯಲ್ಲಿ ಬಂಧಿಸಬೇಕು. ಒಂದು ವೇಳೆ ಬಂಧಿಸದಿದ್ದರೆ ಐಜಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು, ಕೆಪಿಸಿಸಿ ಮಾಧ್ಯಮ ವಕ್ತಾರ ಎಂ.ಲಕ್ಷ್ಮಣ್ ಹೇಳಿಕೆ ನೀಡಿದರು.
ಇಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಶ್ವತ್ಥ ನಾರಾಯಣ್ ವಿರುದ್ಧ ಎಫ್ಐಆರ್ ದಾಖಲಾಗಿ ಒಂದು ವಾರ ಕಳೆದರು ಅವರನ್ನು ಬಂಧಿಸಿಲ್ಲ. ಮೈಸೂರಿನ ದೇವರಾಜ ಪೋಲಿಸ್ ಠಾಣೆಯ ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದು, ಇದೀಗ ಮಂಡ್ಯಗೆ ದೂರನ್ನು ವರ್ಗಾವಣೆ ಮಾಡಿದ್ದಾರೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಅಶ್ವತ್ಥ ನಾರಾಯಣ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ಮಾಡಿದಂತಹ ಕೆಲಸವನ್ನು ಪೊಲೀಸರು ಮಾಡಬೇಡಿ. ಯಾರು ಒತ್ತಡಕ್ಕೆ ಒಳಗಾಗದೇ ಕಾನೂನು ರೀತಿಯ ಸಾಮಾನ್ಯ ಜನರ ಪರವಾಗಿ ಕೆಲಸ ಮಾಡಿ. ಬಿಜೆಪಿ ಪಕ್ಷ ಅಂತಲ್ಲ ಕಾಂಗ್ರೆಸ್ ಪಕ್ಷ ಆದರೂ ಸರಿಯೇ ತರಲೆ ಮಾಡಿದರು ಪ್ರಕರಣ ದಾಖಲಿಸಿಕೊಂಡು ಅಂತವರ ವಿರುದ್ದ ಕ್ರಮ ತೆಗೆದುಕೊಳ್ಳಿ ಎಂದು ಎಂ.ಲಕ್ಷ್ಮಣ್ ಹೇಳಿದರು.
ಕ್ಷೇತ್ರಗಳಿಗೆ ಹೋದರೆ ಪ್ರತಾಪ್ ಸಿಂಹ ಅವರಿಗೆ ಕಲ್ಲು ಹೊಡೆಯುತ್ತಾರೆ :15 ದಿನಗಳಲ್ಲಿ ನಮ್ಮ ಸರ್ಕಾರ 34 ಮಂತ್ರಿಗಳನ್ನು ಒಳಗೊಂಡ ಪೂರ್ಣ ಸರ್ಕಾರ ರಚನೆಯಾಗಿದ್ದು, ದೇಶದಲ್ಲೇ ಮೊದಲು. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದರಲ್ಲಿ ಯಾವುದೇ ಅನುಮಾನ ಬೇಡ. ಬಿಜೆಪಿಯವರು ಆತುರವಾಗಿ ಈ ವಿಚಾರದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಲು ಹೊರಟಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಮಾಡಲು ಸಮಯ ನಿಗದಿ ಮಾಡಲು ಬಿಜೆಪಿಯವರು ಯಾರು?. ಸಂಸದ ಪ್ರತಾಪ್ ಸಿಂಹ ಚುನಾವಣೆ ಸಮಯದಲ್ಲಿ ವರುಣಾದಲ್ಲಿ ಬೆಂಕಿ ಹಚ್ಚಲು ಹೋಗಿದ್ದರು. ಇವರು ಈಗ ತಮ್ಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕ್ಷೇತ್ರಗಳಿಗೆ ಹೋದರೆ ಓಡಿಸಿಕೊಂಡು ಬಂದು ಕಲ್ಲಲ್ಲಿ ಹೊಡೆಯುತ್ತಾರೆ. ಇವನು ಗ್ಯಾರಂಟಿ ಯೋಜನೆಯ ಜಾರಿಗೆ ಡೆಡ್ ಲೈನ್ ಕೊಡಲು ಯಾರು? ಎಂದು ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.