ಮೈಸೂರು: ನನ್ನ ಪಠ್ಯವನ್ನು ಮುಂದುವರಿಸಬಾರದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ಗೆ ಪದ್ಮಶ್ರೀ ಪುರಸ್ಕೃತ, ಹಿರಿಯ ಸಾಹಿತಿ ದೇವನೂರು ಮಹಾದೇವ ಖಡಕ್ಕಾಗಿ ಪತ್ರ ಬರೆದಿದ್ದಾರೆ.
ಪತ್ರದ ಸಾರಾಂಶ ಇಂತಿದೆ:ಈ ಹಿಂದೆ, ಹತ್ತನೇ ತರಗತಿಯ ಪಠ್ಯ ಪುಸ್ತಕದಲ್ಲಿರುವ ನನ್ನ ಪಠ್ಯವನ್ನು ಕೈ ಬಿಡಬೇಕೆಂದು ತಮಗೆ ವಿನಂತಿಸಿ ದಿನಾಂಕ: 26.05.2022ರಂದು ಪತ್ರ ಬರೆದು ಕೊರಿಯರ್ ಮುಖಾಂತರ ರವಾನಿಸಿದ್ದೆ. ಅದನ್ನು ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೂ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೂ ಬರೆದು ಕೊರಿಯರ್ ಮಾಡಿದ್ದೆ. ಆ ಪತ್ರದಲ್ಲಿ ನಾನು ಒಪ್ಪಿಗೆ ಇಲ್ಲದಿರುವುದಕ್ಕೆ ಸ್ಪಷ್ಟನೆ ನೀಡಿದ್ದೇನೆ. ಹೀಗಿದ್ದೂ ನನ್ನ ಮನವಿಯನ್ನು ತಾವು ಪರಿಗಣಿಸದೇ, ಇತ್ತೀಚಿನ ತಮ್ಮ ಹೇಳಿಕೆಯಲ್ಲಿ “ಪರಿಷ್ಕೃತ ಮುದ್ರಣವೇ ಜಾರಿಗೆ ಬರುತ್ತದೆ” ಎಂದಿದ್ದೀರಿ. ಕ್ಷಮಿಸಿ, ನಿಮ್ಮ ಈ ಧೋರಣೆ ನನಗೆ ದಬ್ಬಾಳಿಕೆ ಅನ್ನಿಸಿಬಿಟ್ಟಿತು.
ಚತುದ್ವರ್ಣ ವಿರೋಧಿ ಬಸವಣ್ಣನವರ ಪಾಠವನ್ನು ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಕತ್ತು ಹಿಚುಕಿರುವುದು, ಕುವೆಂಪು, ಅಂಬೇಡ್ಕರ್ ಅವರನ್ನು ಗೇಲಿ ಮಾಡುವ ಮನಸ್ಥಿತಿಯ ವ್ಯಕ್ತಿಯನ್ನೇ ಪಠ್ಯಪುಸ್ತಕ ಪರಿಷ್ಕರಣೆಗೆ ಆಧ್ಯಕ್ಷನನ್ನಾಗಿಸಿರುವುದು ಹಾಗೂ ಒಂದು ಒಕ್ಕೂಟ ಸರ್ಕಾರದಲ್ಲಿ ಆ ಒಕ್ಕೂಟದ ಅಂಗವಾಗಿರುವ ಕರ್ನಾಟಕ ರಾಜ್ಯವು ತನಗೂ ಒಂದು ಧ್ವಜವೂ ಬೇಕು ಎಂದು ಧ್ವನಿ ಎತ್ತಿದ ಸಂದರ್ಭದಲ್ಲಿ ಆ ಪರಿಕಲ್ಪನೆಯನ್ನು ತನ್ನ ಲಂಗೋಟಿಗೆ ಹೋಲಿಕೆ ಮಾಡಿದ ಹೀನ ಅಭಿರುಚಿಯ ವ್ಯಕ್ತಿಯನ್ನು ಮಕ್ಕಳ ಪಠ್ಯ ಪರಿಷ್ಕರಣೆ ಮಾಡಲು ಅಧ್ಯಕ್ಷನನ್ನಾಗಿಸಿದೆ.