ಮೈಸೂರು: ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಯ ವಾರ್ಷಿಕ ರಥೋತ್ಸವಕ್ಕೆ ಚಾಮುಂಡಿ ಬೆಟ್ಟದಲ್ಲಿ ರಾಜವಂಶಸ್ಥರಾದ ಯದುವೀರ ಒಡೆಯರ್ ಚಾಲನೆ ನೀಡಿದರು. ಬೆಳಗ್ಗೆಯಿಂದಲೇ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಂಡಿದ್ದವು. ಬೆ.7:50 ರಿಂದ 8:10 ರ ಒಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ರಾಜವಂಶಸ್ಥರಾದ ಯದುವೀರ ಒಡೆಯರ್ ರಥೋತ್ಸವಕ್ಕೆ ಚಾಲನೆ ನೀಡಿದರು.
ನವರಾತ್ರಿ ನಂತರ ಬರುವ ಹಾಗೂ ವಿಜಯದಶಮಿಯ ಜಂಬೂಸವಾರಿಯ ಶುಭ ಮುಹೂರ್ತದಲ್ಲಿ ಬರುವ ನಾಡ ದೇವತೆ ಚಾಮುಂಡೇಶ್ವರಿಯ ರಥೋತ್ಸವ ಇದಾಗಿದೆ. ರಥೋತ್ಸವಕ್ಕೂ ಮುನ್ನ ಚಾಮುಂಡಿ ಬೆಟ್ಟದಲ್ಲಿ ಧಾರ್ಮಿಕ ಕೈಂಕರ್ಯಗಳು ನಡೆದವು. ನಂತರ ರಥೋತ್ಸವ ನಡೆಯಿತು. ರಥ ಚಾಮುಂಡಿ ಬೆಟ್ಟದ ಸುತ್ತಲೂ ಒಂದು ಸುತ್ತು ಸುತ್ತುವ ವೇಳೆ 21 ಸುತ್ತು ಸಿಡಿ ಮದ್ದನ್ನ ಸಿಡಿಸಿ ಗೌರವ ಸಮರ್ಪಣೆ ಸಲ್ಲಿಸಲಾಯಿತು. ಇದಾದ ಬಳಿಕ ರಥಕ್ಕೆ ಭಕ್ತರು ಹಣ್ಣು ಜವನ ಎಸೆದು ಚಾಮುಂಡೇಶ್ವರಿ ತಾಯಿಗೆ ಜೈ ಕಾರ ಹಾಕಿ ರಥವನ್ನು ಎಳೆದು ಪುನೀತರಾದರು. ಆ ಬಳಿಕ ಚಾಮುಂಡೇಶ್ವರಿ ತಾಯಿಯ ಮೂಲ ಮೂರ್ತಿಯ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಿ ಕೊಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜಮಾತೆ ಪ್ರಮೋದ ದೇವಿ ಒಡೆಯರ್, ಚಾಮುಂಡೇಶ್ವರಿ ಅಮ್ಮನವರ ರಥೋತ್ಸವದ ದಿನ ಅಮ್ಮನವರ ದರ್ಶನ ಪಡೆದರೆ ಒಳ್ಳೆದಾಗುತ್ತದೆ ಎಂಬ ನಂಬಿಕೆಯಿಂದ ದೇಶದ ಎಲ್ಲ ಭಾಗಗಳಿಂದಲೂ ಭಕ್ತರು ಆಗಮಿಸಿ ತಾಯಿಯ ದರ್ಶನ ಪಡೆಯುತ್ತಾರೆ. ನಾವು ಸಹ ರಥೋತ್ಸವದಲ್ಲಿ ಭಾಗಿಯಾಗಿ ನಮ್ಮ ನಾಡು ಸುಭಿಕ್ಷವಾಗಲಿ ಎಂದು ಬೇಡಿಕೊಂಡಿದ್ದೇವೆ. ಜೊತೆಗೆ ಮಳೆ, ಬೆಳೆ ಮುಂದೆಯಾದರು ಆಗಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಬೇಡಿಕೊಂಡಿದ್ದೇನೆ ಎಂದು ಇದೇ ಸಂದರ್ಭದಲ್ಲಿ ಪ್ರಮೋದಾ ದೇವಿ ಒಡೆಯರ್ ಹೇಳಿದರು.