ಮೈಸೂರು: ಪತ್ನಿಯ ಅಗಲಿಕೆಯಿಂದ ಮನನೊಂದ ಪತಿ, ಆಕೆಯ ಶವದ ಮುಂದೆಯೇ ಪ್ರಾಣ ಬಿಟ್ಟು ಸಾವಿನಲ್ಲಿಯೂ ಒಂದಾಗಿರುವ ಘಟನೆ ನಂಜನಗೂಡು ತಾಲೂಕಿನ ದೇವರಸನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಭಾಗ್ಯಮ್ಮ (75) ಮತ್ತು ರಂಗಸ್ವಾಮಿ ಅಲಿಯಾಸ್ ಎಳನೀರು ಕರಿಯಯ್ಯ (80) ಮೃತ ದಂಪತಿ. ರಂಗಸ್ವಾಮಿಯವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಕೆಲ ದಿನಗಳಿಂದ ಇವರನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.
ಆದರೆ, ರಂಗಸ್ವಾಮಿಯವರು ಹೆಚ್ಚು ದಿನ ಬದುಕುವುದಿಲ್ಲ ಎಂದು ವೈದ್ಯರು ತಿಳಿಸಿದ್ದರು ಎನ್ನಲಾಗಿದೆ. ಇದರಿಂದ ಚಿಂತೆಗೀಡಾಗಿದ್ದ ಭಾಗ್ಯಮ್ಮ ಆಸ್ಪತ್ರೆಯಿಂದ ಮೊನ್ನೆ ಮನೆಗೆ ವಾಪಸಾಗಿದ್ದರು. ರಾತ್ರಿ ಮಲಗಿದವರು ಬೆಳಗ್ಗೆ ಮೇಲೇಳಲಿಲ್ಲ. ಸ್ವಾಭಾವಿಕವಾಗಿಯೇ ಸಾವನ್ನಪ್ಪಿದ್ದರು. ಇತ್ತ ಪತ್ನಿ ಮೃತಪಟ್ಟಿರುವ ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಂಗಸ್ವಾಮಿಯವರು ಡಿಸ್ಟಾರ್ಜ್ ಮಾಡಿಸಿಕೊಂಡು ಮನೆಗೆ ವಾಪಸಾಗಿದ್ದಾರೆ. ಹೆಂಡತಿಯ ಅಗಲಿಕೆಯ ನೋವಿನಿಂದ ಆಘಾತಕ್ಕೊಳಗಾಗಿದ್ದ ರಂಗಸ್ವಾಮಿ ಆಕೆಯ ಶವದ ಮುಂದೆಯೇ ಪ್ರಾಣ ಬಿಟ್ಟಿದ್ದಾರೆ.
ಶನಿವಾರ ದಂಪತಿಯ ಮೃತದೇಹಗಳ ಅಂತ್ಯಕ್ರಿಯೆ ಗ್ರಾಮದ ಸ್ಮಶಾನದಲ್ಲಿ ನೆರವೇರಿದೆ. ದಾಂಪತ್ಯ ಪ್ರೀತಿಯನ್ನು ಜೋಪಾನ ಮಾಡಿಕೊಂಡಿದ್ದ ಹಿರಿಯ ಜೋಡಿ ಸಾವಿನಲ್ಲೂ ಒಂದಾಗಿದ್ದಾರೆ.
ಈ ಹಿಂದಿನ ಘಟನೆಗಳು: ಇತ್ತೀಚಿಗೆ, ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಡೋಣೂರ ಗ್ರಾಮದಲ್ಲಿ ವೃದ್ಧ ದಂಪತಿ ಸಾವಿಗೀಡಾಗಿದ್ದರು. ರಾಮಪ್ಪ ಟಕ್ಕಳಕಿ (78) ಹಾಗೂ ಶಾಂತವ್ವ ಟಕ್ಕಳಕಿ (72) ಮೃತರು. ಈ ದಂಪತಿ 45 ವರ್ಷಗಳ ಕಾಲ ಸಂಸಾರ ನಡೆಸಿದ್ದರು. ಅನಾರೋಗ್ಯ ಕಾರಣ ಶಾಂತವ್ವ ಭಾನುವಾರ ಬೆಳಗ್ಗೆ ಮೃತಪಟ್ಟಿದ್ದರು. ಪತ್ನಿ ಸಾವಿನ ಸುದ್ದಿ ತಿಳಿದು ಆಘಾತಗೊಂಡ ರಾಮಪ್ಪ ಹೃದಯಾಘಾತದಿಂದ ಮೃತಪಟ್ಟಿದ್ದರು. ಕುಟುಂಬಸ್ಥರು ದಂಪತಿಯ ಅಂತ್ಯಸಂಸ್ಕಾರ ನೆರವೇರಿಸಿದ್ದರು.
ಸಾವಿನಲ್ಲೂ ಒಂದಾದ ತಾಯಿ-ಮಗ:ಕೆಲವು ತಿಂಗಳುಗಳ ಹಿಂದೆ, ಮಗನ ಸಾವಿನ ಸುದ್ದಿ ತಿಳಿದ ತಾಯಿ ಹೃದಯಾಘಾತದಿಂದ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದಲ್ಲಿ ನಡೆದಿತ್ತು. ಮಗ ದಶರಥ ದುರ್ವೆ (60), ತಾಯಿ ಶಾವಕ್ಕ ದುರ್ವೆ (90) ಮೃತರು. ಅನಾರೋಗ್ಯಕ್ಕೀಡಾಗಿದ್ದ ದಶರಥ, ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಮೃತ ಪಟ್ಟಿದ್ದರು.
ಮಗನ ಸಾವಿನ ಸುದ್ದಿ ತಿಳಿದ ತಾಯಿ ಶಾವಕ್ಕ ಹೃದಯಾಘಾತವಾಗಿ ಮೃತಪಟ್ಟಿದ್ದರು. ಇದರೊಂದಿಗೆ ತಾಯಿ-ಮಗ ಇಬ್ಬರೂ ಸಾವಿನಲ್ಲೂ ಒಂದಾಗಿದ್ದರು. ತಾಯಿ-ಮಗನ ಸಾವಿನಿಂದ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಇಬ್ಬರ ಅಂತ್ಯಕ್ರಿಯೆಯನ್ನು ಒಂದೇ ಸ್ಥಳದಲ್ಲಿ ನೆರವೇರಿಸಿದ್ದರು. ಇನ್ನು ಅಂತ್ಯಕ್ರಿಯೆಯಲ್ಲಿ ಭಾಗಿವಹಿಸಿದ ಕುಟುಂಬ ಸದಸ್ಯರು, ಸುತ್ತಮುತ್ತಲಿನ ಗ್ರಾಮಸ್ಥರು ತಾಯಿ-ಮಗನ ಸಾವಿಗೆ ಕಂಬನಿ ಮಿಡಿದಿದ್ದರು.
ಇದನ್ನೂ ಓದಿ:ಮೈಸೂರು: ಮಹಿಳಾ ಪಿಎಸ್ಐ ಪುತ್ರ ವ್ಹೀಲಿಂಗ್ ಮಾಡುತ್ತಿದ್ದ ಬೈಕ್ ಡಿಕ್ಕಿ, ವೃದ್ಧ ಸಾವು.. ಪಿಎಸ್ಐ ವರ್ಗಾವಣೆ