ಮೈಸೂರು: ಸಲಗ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಉತ್ತಮ ಪ್ರತಿಕ್ರಿಯೆ ಬಂದಿದೆ. ಚಿತ್ರದಲ್ಲಿ ಮೈಸೂರಿನ ಪ್ರತಿಭೆಗಳು ನಟಿಸಿದ್ದು, ಅವರೇ ಚಿತ್ರದ ಬೆನ್ನೆಲುಬು ಎಂದು ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ತಿಳಿಸಿದರು.
ಚಿತ್ರದ ಯಶಸ್ಸು ಬಗ್ಗೆ ಮಾತನಾಡಿದ ದುನಿಯಾ ವಿಜಯ್, ಚಿತ್ರದಲ್ಲಿ ಬಾಲನಟರು ಮನೋಜ್ಞವಾಗಿ ಅಭಿನಯಿಸಿದ್ದು, ಬಾಲ ಕಲಾವಿದರನ್ನು ರಂಗಾಯಣ ಹಾಗೂ ನಟನದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ. ಚಿತ್ರದಲ್ಲಿ 18 ನಿಮಿಷ ಮಕ್ಕಳೇ ಬರುತ್ತಾರೆ ಎಂದರು.
ಸಲಗ ಚಿತ್ರದ ಯಶಸ್ಸಿನ ಬಗ್ಗೆ ಸಂತಸ ಹಂಚಿಕೊಂಡ ನಟ ದುನಿಯಾ ವಿಜಯ್ ಭೂಗತ ಲೋಕದ ಕುರಿತು ಚಿತ್ರವಿದ್ದು, ಮಕ್ಕಳ ಬದುಕು ಹಾಳಾಗಬಾರದು, ಅಂತೆಯೇ ಮಕ್ಕಳು ರೌಡಿಸಂ ಜೀವನಕ್ಕೆ ಪ್ರವೋಕ್ ಆಗಬಾರದು ಎಂಬ ದೃಷ್ಟಿಕೋನದಿಂದ ಚಿತ್ರವನ್ನು ಮಾಡಿದ್ದೇನೆ. ಭೂಗತ ಲೋಕ ಮತ್ತು ಅಶ್ಲೀಲ ಸಂಭಾಷಣೆ ಇರುವುದರಿಂದ ಚಿತ್ರಕ್ಕೆ ‘A’ ಪ್ರಮಾಣ ಪತ್ರ ದೊರೆತಿದೆ. ಈ ಸಿನಿಮಾ ಮಕ್ಕಳು ಸುಳ್ಳು ಹೇಳಿ ಹೇಗೆ ದಾರಿ ತಪ್ಪುತ್ತಾರೆ ಎಂಬುದನ್ನು ಹೇಳುತ್ತದೆ ಎಂದರು.
ಜೀವನದಲ್ಲಿ ತಂದೆ ತಾಯಿಯೇ ದೇವರು. ಕೊನೆಗಾಲದಲ್ಲಿ ಅವರು ಮಕ್ಕಳಂತಾಗುತ್ತಾರೆ. ಅವರನ್ನು ಮಕ್ಕಳಂತೆ ಆರೈಕೆ ಮಾಡಬೇಕು. ನಮ್ಮ ತಾಯಿ ಈ ಚಿತ್ರವನ್ನು ನೋಡಲಿಲ್ಲ ಎಂಬ ಬೇಸರವಿದೆ ಎಂದರು.
ನವೆಂಬರ್ 1 ರಾಜ್ಯೋತ್ಸವ ದಿನದಂದ ಮೈಸೂರಿನ ಸಲಗ ಚಿತ್ರ ಪ್ರದರ್ಶನವಿರುವ ಚಿತ್ರಮಂದಿರಗಳಲ್ಲಿ ಇಡೀ ಚಿತ್ರ ತಂಡ ಭೇಟಿ ನೀಡಿ ಜನರನ್ನು ಭೇಟಿಯಾಗಲಿದೆ. ಸಲಗ ಚಿತ್ರದ ಯಶಸ್ಸು ಇಡೀ ತಂಡಕ್ಕೆ ಸಲ್ಲಬೇಕು. ಸಲಗ ಪಾರ್ಟ್ -2 ನಿರ್ದೇಶನದ ಬಗ್ಗೆ ಸದ್ಯಕ್ಕೆ ಯಾವುದೇ ಯೋಚನೆ ರೂಪಿಸಿಲ್ಲ. ಮುಂದೆ ನೋಡೋಣ ಎಂದು ಚಿತ್ರ ನಿರ್ದೇಶಕ ದುನಿಯಾ ವಿಜಯ್ ತಿಳಿಸಿದರು.