ಮೈಸೂರು: ಸರ್ಕಾರದ 25 ಲಕ್ಷ ರೂ. ಸಬ್ಸಿಡಿ ಬಿಡುಗಡೆ ಮಾಡಲು ಉದ್ಯಮಿಯಿಂದ 1.50 ಲಕ್ಷ ರೂ.ಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮೈಸೂರು ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಹಾಗೂ ಉಪನಿರ್ದೇಶಿಕಿ ಹಣ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಮೈಸೂರು ತಾಲೂಕಿನ ಕೈಗಾರಿಕಾ ಪ್ರದೇಶದ ನಿವಾಸಿಯೊಬ್ಬರು ಸಣ್ಣ ಪ್ರಮಾಣದ ಕೈಗಾರಿಕೆ ಸ್ಥಾಪಿಸಲು 2 ಕೋಟಿ ರೂ. ಸಾಲವನ್ನು 2019 ರಲ್ಲಿ ಕರ್ನಾಟಕ ಸ್ಟೇಟ್ ಫೈನಾನ್ಸ್ ಕಾರ್ಪೊರೇಷನ್ನಿಂದ ಪಡೆದಿದ್ದರು. ನಂತರ ಸಣ್ಣ ಕೈಗಾರಿಕಾ ಕಂಪನಿಯನ್ನ ಪ್ರಾರಂಭಿಸಿದ್ದರು.
ಇವರು ಪಡೆದ ಸಾಲಕ್ಕೆ ಸರ್ಕಾರದಿಂದ 25 ಲಕ್ಷ ರೂ. ಸಬ್ಸಿಡಿ ಮಂಜೂರಾಗಿತ್ತು. ಆದರೆ, ಸಬ್ಸಿಡಿ ಮೊತ್ತವನ್ನು ಬಿಡುಗಡೆ ಮಾಡಲು ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಡಿ.ಕೆ.ಲಿಂಗರಾಜು ಹಾಗೂ ಉಪನಿರ್ದೇಶಕಿ ಎಲ್ ಮೇಘಲಾ ಅವರು ಉದ್ಯಮಿ ಬಳಿ 1.50 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದರು.