ಮೈಸೂರು : ದಸರಾ ಮಹೋತ್ಸವದ ಅಂಗವಾಗಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗೆ, ಜನಸಾಮನ್ಯರಿಗೆ ಹಾಗೂ ಪ್ರವಾಸಿಗರಿಗೆ ಮೈಸೂರಿನ ಇತಿಹಾಸ, ಪಾರಂಪರಿಕ ಕಟ್ಟಡಗಳ ಹಿನ್ನೆಲೆ, ಪ್ರಾಮುಖ್ಯತೆ ಬಗ್ಗೆ ತಿಳಿಸಿಲು ಶನಿವಾರ ರಂಗಚಾರ್ಲು ಭವನದಲ್ಲಿ (ಟೌನ್ ಹಾಲ್) ಆಯೋಜಿಸಿದ್ದ ಪಾರಂಪರಿಕ ನಡಿಗೆ ಕಾರ್ಯಕ್ರಮಕ್ಕೆ ಮೈಸೂರು ಮಹಾನಗರ ಪಾಲಿಕೆಯ ಉಪ ಮಹಾಪೌರರಾದ ಡಾ. ಜಿ. ರೂಪ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೈಸೂರು ಎಂದಾಕ್ಷಣ ನೆನಪಿಗೆ ಬರುವುದೇ ಯೋಗ ನಗರಿ, ಸಾಂಸ್ಕೃತಿಕ ನಗರಿ, ಅರಮನೆಗಳ ನಗರಿ ಹಾಗೂ ಪರಂಪರೆ ನಗರಿ ಎಂದು. ಇಂತಹ ಪರಂಪರೆಯುಳ್ಳ ನಗರಿಯ ಇತಿಹಾಸವನ್ನು ಪಾರಂಪರಿಕ ನಡಿಗೆಯ ಮೂಲಕ ತಿಳಿದುಕೊಳ್ಳಬೇಕು. ಮೈಸೂರಿನಲ್ಲೇ ಅನೇಕ ಪಾರಂಪರಿಕ ಕಟ್ಟಡಗಳಿವೆ. ಅವುಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ ಎಂದು ಹೇಳಿದರು.
ಡಾ. ಶಳ್ವ ಪಿಳ್ಳೆ ಅಯ್ಯಂಗಾರ್ ಮಾತನಾಡಿ, ಈ ರಂಗಚಾರ್ಲು ಪುರಭವನವನ್ನು (ಟೌನ್ ಹಾಲ್) ದಿವಾನ್ ರಂಗಚಾರ್ಲು ಅವರ ಸೇವೆಯ ಸವಿನೆನಪಿಗಾಗಿ 10ನೇ ಚಾಮರಾಜ ಒಡೆಯರ್ ಅವರು 1884ರ ಏ. 01 ರಂದು ಕಟ್ಟಿಸಿದ್ದರು. ಈ ಭವನದ ವಿಶೇಷತೆ ಎಂದರೆ ಸಿಮೆಂಟ್ ಬಳಸದೆ ನಿರ್ಮಿಸಿರುವ ಕಟ್ಟಡವಾಗಿದೆ ಎಂದು ಮಾಹಿತಿ ನೀಡಿದರು.
ಸಾಮಾನ್ಯವಾಗಿ ಎಲ್ಲರೂ ಸಿಮೆಂಟ್ ಕಟ್ಟಡಗಳು ಹೆಚ್ಚು ಸದೃಢವಾಗಿರುತ್ತದೆ ಎಂದು ನಂಬಿರುತ್ತಾರೆ. ಆದರೆ ಸಿಮೆಂಟ್ ಕಟ್ಟಡಗಳ ಆಯಸ್ಸು ಕೇವಲ 60 ರಿಂದ 70 ವರ್ಷಗಳು ಮಾತ್ರ. ಹೀಗಾಗಿ, ಇಂತಹ ಕಟ್ಟಡಗಳನ್ನು ಮಾರ್ಟರ್ ಬಳಸಿ ಕಟ್ಟಿದ್ದರಿಂದ ಇಂದಿಗೂ ಅನೇಕ ಕಟ್ಟಡಗಳು ಕಾಣಸಿಗುತ್ತಿವೆ. ಭಾರತದ ಸಂವಿಧಾನದಲ್ಲೇ ಪಾರಂಪರಿಕ ಕಟ್ಟಡಗಳ ಸಂರಕ್ಷಿಸಬೇಕು ಎಂದು ತಿಳಿಸಲಾಗಿದೆ. ಸರ್ಕಾರ ಒಂದೇ ಸಂರಕ್ಷಿಸಲು ಆಗುವುದಿಲ್ಲ. ಅದಕ್ಕೆ ಎಲ್ಲರ ಸಹಕಾರ ಅವಶ್ಯಕ. ಹೀಗಾಗಿ, ಇಂತಹ ಕಟ್ಟಡಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಎಂದು ತಿಳಿಸಿದರು.